ಸ್ನೇಹಿತನ ಮೇಲಿನ ದ್ವೇಷಕ್ಕೆ ಆತನ ಮಗನನ್ನು ಅಪಹರಿಸಿ, ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 3.25 ಲಕ್ಷ ರೂ. ದಂಡ ವಿಧಿಸಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ ಗ್ರಾಮದ ಎನ್ಎಂ ಬಸವರಾಜಪ್ಪ (40) ಶಿಕ್ಷೆಗೆ ಒಳಗಾದ ಅಪರಾಧಿ.
ಶಿವಮೊಗ್ಗದ ಆಲ್ಕೊಳ ನಿವಾಸಿ ನಿಂಗರಾಜು ಮತ್ತು ಬಸವರಾಜಪ್ಪ ಮೊದಲಿನಿಂದ ಪರಿಚಿತರು.
ನಿಂಗರಾಜು ಮೇಲಿನ ಹಳೇ ದ್ವೇಷಕ್ಕೆ ಆತನ ಮಗ ಪ್ರೇಮ್ ಕುಮಾರ್ನನ್ನು (8) ಬಸವರಾಜಪ್ಪ ಅಪಹರಣ ಮಾಡಿದ್ದ. 2017ರ ಮಾರ್ಚ್ 2 ರಂದು ಆಳ್ಕೊಳ ಸರ್ಕಲ್ನಿಂದ ಅಪಹರಣ ಮಾಡಿ, ಚುರ್ಚಿಗುಂಡಿ ಹತ್ತಿರ ಕುಮದ್ವತಿ ನದಿ ಬಳಿ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. 
ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಕೆಟಿ ಗುರುರಾಜ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೇ ಆತನ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
		 
                         
                         
                         
                         
                         
                         
                         
                         
                         
                        
