ಶಿವಮೊಗ್ಗ : ಮಲೆನಾಡಿಗರ ಬಹುದಿನದ ಕನಸಾಗಿದ್ದ ಶಿವಮೊಗ್ಗ ಏರ್ಪೋರ್ಟ್ ನಲ್ಲಿ ನಾಳೆಯಿಂದ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡುವ ಇಂಡಿಗೋ ವಿಮಾನ ಬೆಳಗ್ಗೆ 11:05ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಮೊದಲ ವಿಮಾನ ಆಗಮಿಸುತ್ತಿರುವುದರಿಂದ ಶಿವಮೊಗ್ಗದ ಏರ್ಪೋರ್ಟ್ ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಎಂ ಬಿ ಪಾಟೀಲ್ ವಿಮಾನದ ಮೂಲಕ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮೊದಲ ವಿಮಾನ ಆಗಿರುವುದರಿಂದ ವಾಟರ್ ಸೆಲ್ಯೂಟ್ ಮೂಲಕ ಅಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ.
449 ಕೋಟಿ ವೆಚ್ಚದಲ್ಲಿ 779 ಎಕ್ಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಹಾಗೂ ರಾಜ್ಯದ ಎರಡನೇ ಅತಿ ಉದ್ದನೆಯ ರನ್ ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣ ಶಿವಮೊಗ್ಗ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಮೊದಲ ಹಂತವಾಗಿ ಶಿವಮೊಗ್ಗ ಹಾಗೂ ಬೆಂಗಳೂರಿಗೆ ವಿಮಾನ ಸೇವೆಯನ್ನ ಇಂಡಿಗೋ ಸಂಸ್ಥೆ ಒದಗಿಸಲಿದ್ದು ನಂತರದ ದಿನಗಳಲ್ಲಿ ಶಿವಮೊಗ್ಗದಿಂದ ಮುಂಬೈ ಹೈದರಾಬಾದ್ ಚೆನ್ನೈ ಗೋವಾ ತಿರುಪತಿ ನಗರಗಳಿಗೆ ವಿಮಾನ ಸಂಪರ್ಕ ದೊರೆಯಲಿದೆ.
ವಿಮಾನ ನಿಲ್ದಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ
ಇನ್ನು ವಿಮಾನ ನಿಲ್ದಾಣಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಸಚಿವರಿಗೆ ಜಿಲ್ಲಾಧಿಕಾರಿ ಡಾ ಸೆಲ್ವಮಣಿ , ಎಸ್ ಪಿ ಮಿಥುನ್ ಕುಮಾರ್ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಗಳ ಜೊತೆ ಮಾತನಾಡಿದ ಸಚಿವರು ಶಿವಮೊಗ್ಗ ವಿಮಾನ ನಿಲ್ದಾಣ ಹಗಲು ಮತ್ತು ರಾತ್ರಿಯ ಕಾರ್ಯಚರಣೆ ವ್ಯವಸ್ಥೆ ಹೊಂದಿದೆ. ಅತ್ಯಾಧುನಿಕವಾಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ
ಶಿವಮೊಗ್ಗ ವಿಮಾನ ನಿಲ್ದಾಣದ ಸದುಪಯೋಗವನ್ನು ಮಧ್ಯ ಕರ್ನಾಟಕದ ಜನತೆ ಬಳಸಿಕೊಳ್ಳಬೇಕು. ವಿಮಾನಯಾನದ ಸೌಕರ್ಯ ಲಭ್ಯವಾದ ಬಳಿಕಗಳ ಅಭಿವೃದ್ಧಿಗೆ ಇದು ನೆರವಾಗಲಿದೆ. ಜಿಲ್ಲೆಗೆ ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಕೂಡ ಈಗಾಗಲೇ ನಮ್ಮ ಪ್ರಯತ್ನ ಸಾಗಿದೆ ಎಂದರು .
ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಕಳಪೆ ಆಗಿರುವ ವಿಚಾರ ಮಾತನಾಡಿ ಜಿಲ್ಲೆಯಲ್ಲಿ ಬಹುತೇಕ ಹಿಂದಿನ ಸರ್ಕಾರದಲ್ಲಿ ನಡೆದ ಕಾಮಗಾರಿಗಳು ಕಳಪೆಯಾಗಿರುವ ಕುರಿತು ದೂರು ಬಂದಿದೆ. ಇಂದು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೆಪ್ಟೆಂಬರ್ 2 ಅಥವಾ 3 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಅಲ್ಲಿ ಚರ್ಚಿಸುತ್ತೇನೆ.ಆನಂತರ ಕಳಪೆಯಾಗಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ನಾಳೆ ಬೆಳಗ್ಗೆ ನಾರಾಯಣ ಗುರು ಜಯಂತಿಯಲ್ಲಿ ಪಾಲ್ಗೊಂಡು ನಂತರ ವಿಮಾನದ ಮೂಲಕ ಬೆಂಗಳೂರಿಗೆ ತೆರಳುತ್ತೇನೆ. ನಾಳೆ ವಿಮಾನ ನಿಲ್ದಾಣ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವನಾಗಿ ಪಾಲ್ಗೊಳ್ಳುತ್ತೇನೆ ಎಂದರು.