ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳು ಎಂದು ಮನನೊಂದ ಆಯನೂರಿನ ಯುವಕ ಆತ್ಮಹತ್ಯೆ!
ದೇಶ, ಭಾಷೆ ,ಜಾತಿ, ಧರ್ಮ, ವಯಸ್ಸು ಮೀರಿ ಮದುವೆಗಳು ನಡೆಯುವುದುಂಟು ಆದರೆ ಈ ಯುವಕನಿಗೆ ತನ್ನನ್ನು ಮದುವೆಯಾಗುವ ಯುವತಿಯ ವಯಸ್ಸು ತನಗಿಂತ ಹೆಚ್ಚಿದೆ ಎಂಬ ಕಾರಣವೇ ಮರಣ ಶಾಸನವಾಗಿ ಪರಿಣಮಿಸಿದೆ.
ಹೌದು, ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳೆಂಬ ಕಾರಣಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳಲು ಕಳೆನಾಶಕ ಸೇವಿಸಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ.
ಶಿವಮೊಗ್ಗ ತಾಲೂಕು ಆಯನೂರು ಸಮೀಪದ ಕೋಟೆ ಗ್ರಾಮದಲ್ಲಿ ಸ್ವಾಮಿನಾಥ (32) ಎಂಬ ಯುವಕ ಮೃತಪಟ್ಟಿದ್ದಾನೆ. ಸ್ವಾಮಿನಾಥ್‌ಗೆ ಎರಡು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹುಡುಗಿ ಈತನಿಗಿಂತ ಮೂರು ವರ್ಷ ದೊಡ್ಡವಳು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಬೇಸರಗೊಂಡಿದ್ದ ಈತ ಮದುವೆ ಬೇಡವೆಂದು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಇದು ಹುಡುಗಿ ಮನೆಯವರಿಗೆ ತಿಳಿದು ಸ್ವಾಮಿನಾಥನ ಮನೆಗೆ ಬಂದು ಗಲಾಟೆ ಮಾಡಿ ಮದುವೆ ಆಗುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ .ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದೀಗ ಕುಂಸಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.