Headlines

ಬುದ್ದಿಮಾಂದ್ಯ ಅಂಗವಿಕಲ ಮಗಳೊಂದಿಗೆ ವಾಸಿಸುತ್ತಿರುವ ಬಡ ಮಹಿಳೆಯ ಬದುಕಿಗೆ ಸಿಕ್ಕಿತೇ ಆಸರೆ?| “ಗೃಹಲಕ್ಷ್ಮಿಯರ ರಾಜ್ಯದಲ್ಲೊಬ್ಬಳು ನತದೃಷ್ಟ ಲಕ್ಷ್ಮಿ”|shocking news

ಬುದ್ದಿಮಾಂದ್ಯ ಅಂಗವಿಕಲ ಮಗಳೊಂದಿಗೆ ವಾಸಿಸುತ್ತಿರುವ ಬಡ ಮಹಿಳೆಯ ಬದುಕಿಗೆ ಸಿಕ್ಕಿತೇ ಆಸರೆ?| 6ವರ್ಷಗಳಿಂದ ಸ್ವ‍‍ಚ್ಚ ಸಂಕೀರ್ಣ ಕಟ್ಟಡದಲ್ಲಿ ವಾಸ| ಅಂತ್ಯೋದಯ ಕಾರ್ಡ್ ಇಲ್ಲ | ಮಗಳ ಚಿಕಿತ್ಸೆಗೆ ಸ್ಪಂದಿಸುವವರಿಲ್ಲ

ಇಂದು ರಾಜ್ಯಾದ್ಯಂತ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ  ಗೃಹಲಕ್ಷ್ಮಿ ಯೋಜನೆ ಎಲ್ಲೆಡೆ ಜಾರಿಯಾಗುತ್ತಿದೆ ಆದರೆ ಇಲ್ಲೊಬ್ಬ ನತದೃಷ್ಟ ಲಕ್ಷ್ಮಿ ತನ್ನ ಅಂಗವಿಕಲ ಬುದ್ದಿಮಾಂದ್ಯ ಮಗಳೊಂದಿಗೆ ಮೂಲಭೂತ ಸೌಕರ್ಯಕ್ಕಾಗಿ ಅಂಗಲಾಚುತಿದ್ದಾಳೆ.


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮೇಲಿನ ಸಂಪಳ್ಳಿ‌ ಗ್ರಾಮದ ಶಶಿಕಲಾ ಎಂಬ ಮಹಿಳೆ ತನ್ನ 20 ವರ್ಷದ ಬುದ್ದಿಮಾಂದ್ಯ ಮಗಳಾದ ಪೂಜಾಳೊಂದಿಗೆ. ಮೂಲಭೂತ ಸೌಕರ್ಯಕ್ಕಾಗಿ ಅಂಗಲಾಚುತ್ತಿರುವುದು ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿದೆ.

ಮೇಲಿನ ಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆಯ ಮನೆಯು ಬೀಳುವ ಹಂತದಲ್ಲಿದ್ದ ಕಾರಣ ಕಳೆದ ಆರು ವರ್ಷಗಳಿಂದ ಕಸ ವಿಲೇವಾರಿ ಸ್ವಚ್ಚ ಸಂಕೀರ್ಣ ಘಟಕದಂತಿರುವ ಸಭಾ ಭವನದಲ್ಲಿ ತನ್ನ ಮಗಳೊಂದಿಗೆ ವಾಸಿಸುತಿದ್ದು ಶೌಚಾಲಯವಿಲ್ಲದೇ,ವಿದ್ಯುತ್ ಸಂಪರ್ಕವಿಲ್ಲದೇ , ನೀರಿನ ವ್ಯವಸ್ಥೆಯಿಲ್ಲದೇ ಕತ್ತಲಲ್ಲಿ ಕಾಲ ಕಳೆಯುತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.


ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಇಂಥ ಶೋಚನೀಯ ಸ್ಥಿತಿ ಎದುರಿಸುತ್ತಿದ್ದು, ಇವರ ಸಮಸ್ಯೆಗೆ ಪರಿಹಾರ ಒದಗಿಸಬೇಕಾದವರೇ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.

ಬಲಾಢ್ಯರಿಗೆಲ್ಲಾ ಬಿಪಿ ಎಲ್ ಕಾರ್ಡ್ ನೀಡುವ ಅಧಿಕಾರಿಗಳು ಇಂತಹ ಬಡ ಮಹಿಳೆಗೆ ಅಂತ್ಯೋದಯ ಕಾರ್ಡ್ ನೀಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ.ಮಗಳ ಅಂಗವಿಕಲ ವೇತನದಲ್ಲಿ ಬರುವ ಅಷ್ಟೋ ಇಷ್ಟೋ ಹಣದಲ್ಲಿ ಜೀವನ ಸಾಗಿಸುತ್ತಿರುವ ಶಶಿಕಲಾ ಮತ್ತು ಆಕೆಯ ಅಂಗವಿಕಲ ಬುದ್ದಿಮಾಂದ್ಯ ಮಗಳ ಶಾಪ ನಿರ್ಲಜ್ಜ ಅಧಿಕಾರಿಗಳಿಗೆ ತಟ್ಟದೇ ಇರದು.


ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ವಚ್ಚಭಾರತ್ ಅಡಿಯಲ್ಲಿ ದೇಶಾದ್ಯಂತ ಮನೆಮನೆಗೆ ಶೌಚಾಲಯ ನೀಡಿದ್ದೇವೆ ಎಂದು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿರುವ ಮಾರುತಿಪುರ ಗ್ರಾಮಾಡಳಿತಕ್ಕೆ ಈ ಅನಾಥ ಮಹಿಳೆ ಕಾಣದೇ ಇರುವುದು ದುರದೃಷ್ಟಕರವೇ ಸರಿ….!!!

ಬುದ್ದಿಮಾಂದ್ಯ ಅಂಗವಿಕಲ ಮಗಳನ್ನು ಸಭಾಭವನದ ಕಟ್ಟಡದಲ್ಲಿ ಕೂಡಿಹಾಕಿ ದಿನವೆಲ್ಲಾ ಊರಿನ ನಾಲ್ಕಾರು ಮನೆಗಳಲ್ಲಿ ಆಹಾರ ಅರಸಿ ಜೀವಿಸುತ್ತಿರುವ ಈ ಶಶಿಕಲಾ ಲಜ್ಜೆಗೆಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ನತದೃಷ್ಟ ಲಕ್ಷ್ಮಿಯಲ್ಲದೇ ಮತ್ತಿನ್ನೇನು…!!??

ಸ್ವಂತ ಜಾಗವನ್ನು ಹೊಂದಿರುವ ಈಕೆಗೆ ಆಶ್ರ ಯೋಜನೆಯಡಿಯಲ್ಲಿ‌ ಮನೆ ನಿರ್ಮಿಸಿಕೊಟ್ಟು ,ಬುದ್ದಿಮಾಂದ್ಯ ಅಂಗವಿಕಲ ಮಗಳ ಚಿಕಿತ್ಸೆಗೆ ನೆರವಾಗುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ.

Leave a Reply

Your email address will not be published. Required fields are marked *