ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ
ಹೊಂಬುಜ : 2012ರಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವರು ಬಹಿರಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ.
ಕಾನೂನಿನ ಮೂಲಕ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿರುವ ಸಂತ್ರಸ್ಥರು ಕಾನೂನಿನ ಮೇಲೆ ನಂಬಿಕೆಯಿಟ್ಟು ತೀರ್ಮಾನ ಬರುವವರೆಗೆ ತಾಳ್ಮೆಯಿಂದ ಇರಬೇಕು. ಸಂತ್ರಸ್ಥರು ನ್ಯಾಯಾಂಗ ತನಿಖೆಗೆ ಸಹಕರಿಸಬೇಕು. ಸನ್ಮಾನ್ಯ ಹೆಗ್ಗಡೆಯವರು ಕೂಡ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿ, ಕುಟುಂಬ ಅಥವಾ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಸನ್ಮಾನ್ಯ ಹೆಗ್ಗಡೆಯವರ ಮತ್ತು ಧರ್ಮಸ್ಥಳ ಕ್ಷೇತ್ರದ ಸಾಮಾಜಿಕ ಪ್ರಗತಿಯನ್ನು ಸಹಿಸದೇ ಕೆಲವು ವ್ಯಕ್ತಿಗಳು ಆರೋಪ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಕ್ಷೇತ್ರದ ಭಕ್ತಾಭಿಮಾನಿಗಳು ಶಾಂತಿಯಿಂದ ಕಾನೂನಿನ ಹೋರಾಟದಲ್ಲಿ ಹೆಗ್ಗಡೆಯವರ ಜೊತೆ ನಿಲ್ಲಬೇಕು ಮತ್ತು ಅಪಪ್ರಚಾರಗಳಿಂದಾಗಿ ಗೊಂದಲಕ್ಕೆ ಒಳಗಾಗಬಾರದು ಎಂದು ಶ್ರೀಗಳವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.