ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್ ಪ್ರಕರಣ – ಓರ್ವನ ಬಂಧನ
ತೀರ್ಥಹಳ್ಳಿ : ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ ದಾಸನಗದ್ದೆ ಸಮೀಪದ ಹಿರೇಗದ್ದೆಯಲ್ಲಿ ಶುಕ್ರವಾರ ತಡ ರಾತ್ರಿ ಮಿಸ್ ಫೈರಿಂಗ್ ಆಗಿ ವ್ಯಕ್ತಿಯೋರ್ವನಿಗೆ ಗಾಯವಾದ ಪ್ರಕರಣದಲ್ಲಿಗ ತೀರ್ಥಹಳ್ಳಿ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿ ಓರ್ವನನ್ನು ಬಂಧಿಸಲಾಗಿದೆ.
ಅಕ್ರಮ ನಾಡ ಬಂದೂಕು ಹೊಂದಿದ್ದು ಮತ್ತು ಕಾಡು ಪ್ರಾಣಿಯನ್ನ ಹಿಡಿಯಲು ಹೋಗಿದ್ದಕ್ಕೆ ಸಹೋದರರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಹೋದರರಿಬ್ಬರು ನಾಡ ಬಂದೂಕುಗಳನ್ನ ಹಿಡಿದು ಶಿಕಾರಿಗೆ ಹೋದಾಗ ತಮ್ಮನ ಬಂದೂಕಿನಿಂದ ಹಾರಿದ ಗುಂಡು ಅಣ್ಣನ ಮೊಣಕಾಲನ್ನ ಸೀಳಿದೆ.
ಕಾಡು ಹಂದಿ ಬೇಟೆಯಾಡಲು ರಾಕೇಶ್ ಮತ್ತು ರಾಜೇಶ್ ಶುಕ್ರವಾರ ರಾತ್ರಿ ಕಾಡು ಹಂದಿ ಹಿಡಿಯಲು ಹೋಗಿದ್ದಾರೆ. ಈ ವೇಳೆ ಅಣ್ಣ ರಾಕೇಶ್ (30) ಕಾಡು ಹಂದಿ ಕಂಡಿದ್ದರಿಂದ ನಾಡ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.
ಆದರೆ ಗುಂಡು ಪ್ರಾಣಿಗೆ ತಗುಲದೆ ಇದ್ದಾಗ ರಾಕೇಶ್ ತಮ್ಮ ರಾಜೇಶ್ ತನ್ನ ಬಂದೂಕಿನಿಂದ ಹಾರಿಸಿದ ಗುಂಡು ರಾಕೇಶ್ ಮೊಣಕಾಲನ್ನ ಗಾಯಗೊಳಿಸಿದೆ. ತಕ್ಷಣವೇ ಜೆ.ಸಿ ಆಸ್ಪತ್ರೆಗೆ ದಾಖಲಿಸಿ ಮಣಿಪಾಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಈಗ ತೀರ್ಥಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ..