ಸೋರುತಿಹುದು ರಿಪ್ಪನ್‌ಪೇಟೆ ಪೊಲೀಸರ ಮನೆಯ ಮಾಳಿಗೆ – ವಸತಿಗೃಹಕ್ಕೆ ಟಾರ್ಪಲ್ ರಕ್ಷಣೆ|Police quarters

ಸೋರುತಿಹುದು ರಿಪ್ಪನ್‌ಪೇಟೆ ಪೊಲೀಸರ ಮನೆಯ ಮಾಳಿಗೆ – ಟಾರ್ಪಲ್ ಗೆ ಮೊರೆ ಹೋದ ಪೊಲೀಸರು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿದೆ.

ಆದರೆ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಮಳೆಯ ನೀರಿನಿಂದ ಸೋರುತ್ತಿದೆ. ಸೋರುತ್ತಿರುವ ವಸತಿ ಗೃಹ ಗಳ  ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಹಾಕಿಕೊಂಡು ಮಳೆಯ ನೀರಿನಿಂದ ರಕ್ಷಣೆ   ಪಡೆಯುತ್ತಿದ್ದಾರೆ.


ನಾಡಿನಲ್ಲಿ ಆಶಾಂತಿ,ಕಳ್ಳತನ, ದರೋಡೆ ,ಆಪಘಾತ ಹೀಗೆ ಅವಘಡಗಳಿಂದ ಸಾವು ನೋವುಗಳಾದಲ್ಲಿ ತಕ್ಷಣ ಮನೆ ಮಠ ಹೆಂಡ್ತಿ ಮಕ್ಕಳು ಸಂಸಾರವನ್ನು ಬಿಟ್ಟು ಹೋಗುವ ನಮ್ಮ ರಕ್ಷಣಾ ಇಲಾಖೆಯವರ ವಸತಿ ನಿಲಯಗಳೇ ಮಳೆಗೆ ಸೋರುವಂತಾಗಿದ್ದು ರಕ್ಷಣೆ ಮಾಡುವ ಪೊಲೀಸರ ಮನೆಗಳೇ ಹೀಗಾದರೆ ಆವರ ಕುಟುಂಬದವರ ಗತಿ ಏನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.


ಬಿಜೆಪಿ ಸರ್ಕಾರದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇದ್ರರವರ ಗಮನಕ್ಕೆ ತರಲಾದರೂ ಸಮಸ್ಯೆಗೆ ಪರಿಹಾರ ಕಾಣದೇ ಸಮಸ್ಯೆಯಾಗಿಯೇ ಉಳಿಯುವಂತಾಗಿ ಪೊಲೀಸರು ತಮ್ಮ ಮನೆಯ ಮೇಲೆ ಪ್ಲಾಸ್ಟಿಕ್ ಹೊಂದಿಕೆಯ ರಕ್ಷಣೆ ಮಾಡಿಕೊಳ್ಳಬೇಕಾದ ಅನಿರ್ವಾತೆ ಎದುರಾಗಿದೆ.

ಕಟ್ಟಡದ ಕಾಮಗಾರಿ ನಡೆಯುವ ಸಂದರ್ಭದಲ್ಲಿಯೇ ಕಟ್ಟಡ ಕಳಪೆಯಾಗಿದೆ ಎಂದು ರಾಜ್ಯಮಟ್ಟದ ಪತ್ರಿಕೆಗಳು ಸಮಗ್ರ ವರದಿಯನ್ನು ಪ್ರಕಟಿಸಲಾಗಿದ್ದು ಉದ್ಘಾಟನೆಗೂ ಮುನ್ನವೇ ಕಳಪೆ ಕಾಮಗಾರಿಯನ್ನು ದುರಸ್ಥಿ ಮಾಡಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಒಟ್ಟಾರೆಯಾಗಿ ಹುಚ್ಚಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬ ಗಾದೆ ಮಾತಿನಂತೆ ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸರ್ಕಾರದ ಅನುದಾನ ಸದ್ಬಳಿಕೆ ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿರುವುದಕ್ಕೆ ಈ ಕಟ್ಟಡವೇ ಸಾಕ್ಷಿಯಾಗಿದೆ.

ಹಾಗೆಯೇ ಸುತ್ತಮುತ್ತಲು ಕಾಡಿನಂತೆ  ಗಿಡಗಂಟಿಗಳು ಬೆಳೆದಿದೆ.ಗಿಡಗಂಟಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಈ ವಸತಿಗೃಹಗಳ ಸೌಂದರ್ಯವೇ ಇದೀಗ ಪಾಳು ಬಿದ್ದಂತಿದೆ.
ಪಟ್ಟಣದ ಹೃದಯ ಭಾಗದಲ್ಲಿ ಇರುವ ಈ ಪೊಲೀಸ್ ವಸತಿ ಗೃಹಗಳು ಇತರೆ ಇಲಾಖೆಗೆ ಮಾದರಿಯಾಗಿರಬೇಕು.

ನಿತ್ಯ ಪೊಲೀಸರು ಒತ್ತಡದ ಕರ್ತವ್ಯದಲ್ಲಿದ್ದು ಈಗ ಮಳೆಯಾಗುತ್ತಿರುವ ಕಾರಣ ಮನೆ ತುಂಬ ಸೋರುವಂತಾಗಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವುದೇ ಕಷ್ಟಕರವಾಗಿದೆ ಒಂದು ಕಡೆ ಕರ್ತವ್ಯದ ಒತ್ತಡ ಇನ್ನೊಂದುಕಡೆ ಮನೆ ಸೋರುವಂತಾಗಿ ಕುಟುಂಬದವರು ಹೇಗಿದ್ದಾರೋ ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ.ಹಗಲು ರಾತ್ರಿ ಎನ್ನದೇ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪೊಲೀಸ್ ಸಿಬ್ಬಂದಿಗೆ ಅವರ ರಕ್ಷಣೆ ಮಾಡಿಕೊಳ್ಳುವುದೇ ದುಸ್ಥರವಾಗಿರುವಾಗ ಸರ್ಕಾರ ಇನ್ನಾದರೂ ಇತ್ತ ಗಮನಹರಿಸುವುದರೊಂದಿಗೆ ಪೊಲೀಸ್ ವಸತಿ ನಿಲಯಕ್ಕೆ ಮುಕ್ತಿ ಕಲ್ಪಿಸರೇ ಕಾದುನೋಡಬೇಕಾಗಿದೆ.ಸ್ವಂತ ಕಟ್ಟಡಗಳಿಂದರೂ ಕೂಡಾ ಹಲವರು ಖಾಸಗಿ ಬಾಡಿಗೆ ಮನೆಗಳಲ್ಲಿ ವಾಸಮಾಡುವ ಸ್ಥಿತಿ ಎದುರಾಗಿದೆ.


ಸೋರುತ್ತಿರುವ ವಸತಿ ಗೃಹ ದುರಸ್ತಿ ಪಡಿಸುವಂತೆ ಹಾಗೂ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡುವಂತೆ  ಜನ ಜಾಗೃತಿ ವೇದಿಕೆ ಅಧ್ಯಕ್ಷ ಟಿ ಆರ್ ಕೃಷ್ಣಪ್ಪ  ಸಂಬಂಧಪಟ್ಟವರಿಗೆ  ಮನವಿ ಸಲ್ಲಿಸಿದರು ಸಹ ದುರಸ್ತಿ ಹಾಗೂ ಸ್ವಚ್ಚಗೊಳಿಸುವ ಆಶ್ವಾಸನೆ ನೀಡಿದರೇ ಹೊರತು ಇದುವರೆಗೂ ಆ ಕೆಲಸ ಕಾರ್ಯಗತವಾಗಿಲ್ಲ.

ಇನ್ನಾದರೂ ಸಂಬಂಧಪಟ್ಟವರು ಈ ಪೊಲೀಸ್ ವಸತಿಗೃಹಕ್ಕೆ ಜೀವಕಳೆಯನ್ನು ನೀಡುವರೆ ಎಂದು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *