ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಬಿಜೆಪಿ ಸರ್ಕಾರ ನಿರಾಕರಿಸಿದೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಸಂಸದ ಬಿ ವೈ ರಾಘವೇಂದ್ರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.
ಈ ವೇಳೆ 35ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 9 ವರ್ಷದಿಂದ ಕೇಂದ್ರದಲ್ಲಿ ಅಧಿಕಾರ ನಡೆಸುವ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡುತ್ತಾ ಬಂದಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ 650ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸದೆ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯ ಯೋಜನೆಗಳನ್ನು ಒಪ್ಪಿ ಹಾಗೂ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ 135 ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಯ್ಕೆ ಮಾಡಿ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ.
ಇವೆಲ್ಲವನ್ನೂ ಮನಗಂಡ ಕೇಂದ್ರ ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಾ, ರಾಜ್ಯ ಕಾಂಗ್ರೆಸ್ ಸರ್ಕಾರ ಹೆಚ್ಚುವರಿ ಅಕ್ಕಿಗಾಗಿ ಪ್ರಸ್ತಾವನೆ ಸಲ್ಲಿಸಿದರೂ ರಾಷ್ಟ್ರೀಯ ಆಹಾರ ನಿಗಮಕ್ಕೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿಯನ್ನು ನೀಡಬಾರದೆಂದು ತಾಕೀತು ಮಾಡಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ವಿಫಲ ಮಾಡಲು ಹೊರಟಿದೆ. ಈ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕರ್ನಾಟಕದಿಂದ ಆಯ್ಕೆಯಾಗಿ ಹೋದ 25 ಬಿಜೆಪಿ ಸಂಸದರು ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಮೇಲೆ ಯಾವುದೇ ಒತ್ತಡವನ್ನು ಹೇರಿಲ್ಲ. ರಾಜ್ಯಕ್ಕೆ ಬರಬೇಕಾದಂತಹ ಎಲ್ಲ ಯೋಜನೆಗಳಲ್ಲಿ ಹಾಗೂ ಜಿಎಸ್‌ಟಿ ಸೇರಿದಂತೆ ಎಲ್ಲ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಹಾರದಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆಯಾದರೂ ಸಂಸತ್ತಿನಲ್ಲಿ ತುಟಿ ಬಿಚ್ಚದೆ ಅಸಮರ್ಥರಾಗಿದ್ದಾರೆ. ಬಿಜೆಪಿ ಸಂಸದರು ವಿಕಾಸ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಪ್ರತಿಭಟನಾಕಾರರು ದೂರಿದರು.
ಈ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯಕ್ಕೆ ಬರಬೇಕಾದ ಹೆಚ್ಚುವರಿ ಅಕ್ಕಿಯನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ ಗಿರೀಶ್ , ಮುಖಂಡರಾದ ಬಿ. ಲೋಕೇಶ್, ಈಟಿ ನಿತಿನ್, ಎಸ್. ಕುಮರೇಶ್, ಆರ್. ಕಿರಣ್, ಟಿವಿ ರಂಜಿತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.