ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆವಟೂರು ಗ್ರಾಮದ ಯುವಕ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಂ ಸ್ಯಾಂಡ್ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿಸಿದ್ದಾರೆ. ನಾಗಮಂಗಲ ತಾಲ್ಲೂಕು ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತಿರುಮಲಾಪುರ ಗ್ರಾಮದ ಬಳಿ ಭಾನುವಾರ ನಸುಕಿನ ವೇಳೆ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಹೊಸನಗರ ತಾಲೂಕಿನ ನೆವಟೂರು ಗ್ರಾಮದ ನಿವಾಸಿ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಮಂಜಪ್ಪ ರವರ ಪುತ್ರ ಧೀರಜ್(24) ಮತ್ತು ಮಾಗಡಿ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಹೇಮಂತ್ (24), ಶರತ್ (28) ನವೀನ್ (25) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಭಾನುವಾರ ಬೆಳಗ್ಗಿನ ಜಾವ ಬೆಂಗಳೂರು- ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನ ನೆಲಮಂಗಲದ ನಾಲ್ವರು ಯುವಕರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಲಾರಿ ನಿಧಾನವಾಗಿ ಸಾಗುತ್ತಿತ್ತು. ಇದನ್ನು ಗಮನಿಸದೇ ವೇಗವಾಗಿ ಹೋಗುತ್ತಿದ್ದ ಕಾರು ಹಿಂಬದಿಯಿಂದ ಲಾರಿಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಅರ್ಧ ಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇನ್ನು ಇತರೆ ವಾಹನ ಸವಾರರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಬಂದು ಕಾರಿನಲ್ಲಿದ್ದ ಯುವಕರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನು ಕಾರಿನಲ್ಲಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಲಾರಿ ಎಂ ಸ್ಯಾಂಡ್ ತುಂಬಿಕೊಂಡು ಚನ್ನರಾಯಪಟ್ಟಣಕ್ಕೆ ತೆರಳುತ್ತಿತ್ತು. ಹಿಂದಿನಿಂದ ವೇಗವಾಗಿ ಬಂದ ಶೆವರ್‌ಲೆಟ್ ಸ್ಪಾರ್ಕ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿಡಲಾಗಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತಾಪ :
ಡಿಸಿಸಿ ಬ್ಯಾಂಕ್ ಜೆನರಲ್ ಮ್ಯಾನೇಜರ್ ಮಂಜಪ್ಪ ರವರ ಪುತ್ರ ಧೀರಜ್ ರವರ ಅಕಾಲಿಕ ಮರಣಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಮುಖಂಡರಾದ ಕಾಗೋಡು ತಿಮ್ಮಪ್ಪ,ಆರ್ ಎಂ ಮಂಜುನಾಥ್ ಗೌಡ,ಕಲಗೋಡ್ ರತ್ನಾಕರ್, ಬಂಡಿ ರಾಮಚಂದ್ರ,ಎಂ ಎಂ ಪರಮೇಶ್, ಅಮೀರ್ ಹಂಜಾ,ಆಶಿಫ್ ಭಾಷಾ,ಜಿ ಆರ್ ಗೋಪಾಲಕೃಷ್ಣ ಮತ್ತು ಹರ್ಷ ಸಂತಾಪ ಸೂಚಿಸಿದ್ದಾರೆ,