ತಂದೆಯ ಸಾವಿನ ನೋವಲ್ಲೂ ಹಸೆಮಣೆ ಏರಿದ ಪುತ್ರಿಯರು|ವರನ ಕುಟುಂಬದ ನಡೆಗೆ ಶ್ಲಾಘನೆ|ANP

ತಂದೆಯ ಸಾವಿನ ನೋವಲ್ಲೂ ಹಸೆಮಣೆ ಏರಿದ ಪುತ್ರಿಯರು

ತಂದೆಯನ್ನು ಕಳೆದುಕೊಂಡ ನೋವಿನ ಮಧ್ಯೆ ಸಹೋದರಿಯರು ಹಸೆಮಣಿ ಏರಿದರು.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಬುಧವಾರ ತಬ್ಬಲಿಗಳಾದ ಪಲ್ಲವಿ ಮತ್ತು ಪೂಜಾ ಅವರ ವಿವಾಹ ನೆರವೇರಿಸಿ ಸಂಬಂಧಿಗಳು ಮಾದರಿಯಾದರು.




ಬನವಾಸಿಯ ಮಂಜುನಾಥ್ ರವರ ಪುತ್ರಿಯರಾದ ಪಲ್ಲವಿ ಮತ್ತು ಪೂಜಾ ಅವರ ವಿವಾಹ ನಿಶ್ಚಯವಾಗಿ ಸಕಲ ಸಿದ್ಧತೆ ಮುಗಿದಿತ್ತು. ಇದಕ್ಕಾಗಿ ಇಬ್ಬರು ಹೆಣ್ಣು ಮಕ್ಕಳು ತಂದೆಯೊಂದಿಗೆ ತಮ್ಮ ತಾಯಿಯ ತವರು ಮನೆಯಾದ ಚೆನ್ನಕೊಪ್ಪದ ರುದ್ರಪ್ಪ ಗೌಡರ ಮನೆಗೆ ಆಗಮಿಸಿದ್ದರು. ಮದುವೆ ಮುನ್ನಾ ದಿನವಾದ ಮಂಗಳವಾರ ಈ ಇಬ್ಬರು ಮದುವಣಗಿತ್ತಿಯರ ತಂದೆ ಮಂಜುನಾಥ ಗೌಡರು ಚನ್ನಕೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು.

ಇಬ್ಬರು ಪುತ್ರಿಯರ ಅಜ್ಜ (ತಾಯಿಯ ತಂದೆ) ರುದ್ರಪ್ಪ ಗೌಡರು ಪೂರ್ವನಿಗದಿಯಂತೆ ಮದುವೆ ನಡೆಸಲು ನಿರ್ಧರಿಸಿ ವರನ ಕಡೆಯವರಿಗೆ ದೂರವಾಣಿ ಮೂಲಕ ತಿಳಿಸಿದ್ದರು.




ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಶಿವಾನಂದ ಪಾಟೀಲ್, (ಸಿದ್ದಪ್ಪ ಗೌಡ)ರ ಇಬ್ಬರು ಪುತ್ರರಾದ ವಿಶ್ವನಾಥ ಪಾಟೀಲ್, ಶ್ರೀನಾಥ ಪಾಟೀಲ್‌ಗೆ ಕೊಟ್ಟು ನಿರ್ಧರಿಸಲಾಗಿತ್ತು.

ವರನ ಕಡೆಯವರು ನಿಗದಿತ ಮುಹೂರ್ತದಲ್ಲೇ ಮದುವೆ ನಡೆಯಲು ಒಪ್ಪಿಗೆ ಸೂಚಿಸಿದ ಕಾರಣ ರುದ್ರಪ್ಪ ಗೌಡರ ಕುಟುಂಬಸ್ಥರು ಯಥಾವತ್ತಾಗಿ ವಿವಾಹ ನಡೆಯಲಿದೆ ಎಂದು ಬಂಧು-ಬಳಗಕ್ಕೆ ದೂರವಾಣಿ ಮೂಲಕ ತಿಳಿಸಿದ್ದರು. ವಿವಾಹ ಸಮಾರಂಭಕ್ಕೆ ವರನ ಕಡೆಯಿಂದ ಸುಮಾರು 200 ಜನ ಮತ್ತು ವಧುವಿನ ಕಡೆಯಿಂದ 600ಕ್ಕೂ ಅಧಿಕ ಜನರು ಆಗಮಿಸಿದ್ದರು. ಬಹುತೇಕ ಬಂಧುಗಳು ಇಬ್ಬರು ಹೆಣ್ಣು ಮಕ್ಕಳಿಗೆ ಶುಭ ಕೋರಿ ತಂದೆಯ ಮರಣದ ದುಃಖದ ಸಾಂತ್ವನ ಹೇಳಿದ ದೃಶ್ಯ ಕಂಡುಬಂತು. ಹೆಣ್ಣು ಮಕ್ಕಳ ತಾಯಿ ಕೂಡ ಮೂರು ವರ್ಷದ ಹಿಂದೆ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.

 ವರನ ಕುಟುಂಬದ ನಡೆಗೆ ಶ್ಲಾಘನೆ

ಸಾಗರದ ಸಮಾಜ ಸೇವಕರಾದ ಮಾ.ಸ.ನಂಜುಂಡಸ್ವಾಮಿ ಮತ್ತು ರಾಘವೇಂದ್ರ ಅವರು ಮದುವೆಯ ಸಭಾಭವನಕ್ಕೆ ಆಗಮಿಸಿ ಹೆಣ್ಣು ಮಕ್ಕಳ ಭವಿಷ್ಯದ ಬದುಕು ಹಸನಾಗಿರಲಿ ಎಂದು ಶುಭ ಕೋರಿದರು. ಮದುವೆ ನಿಶ್ಚಯವಾಗಿದ್ದ ಸಂದರ್ಭದಲ್ಲಿ ಕುಟುಂಬಸ್ಥರು ಅಥವಾ ಬಂಧುಗಳು ಮೃತರಾದರೆ ಅಪಶಕುನವೆಂದು ಮದುವೆ ಸಂಬಂಧ
ಕಡಿದುಕೊಳ್ಳುವ ಮೂಢನಂಬಿಕೆ ಮತ್ತು ಕಂದಾಚಾರ ಎಲ್ಲೆಡೆ ಸಾಮಾನ್ಯವಾಗಿದೆ. ಆದರೆ ಯತ್ತಿನಹಳ್ಳಿಯ ಶಿವಾನಂದ ಪಾಟೀಲರ ವಿಶಾಲ ಮನೋಭಾವ ಮತ್ತು ಸಹೃದಯತೆ ಬಗ್ಗೆ ಅಭಿನಂದಿಸಿ ಶ್ಲಾಘಿ ಸಿದರು. ಇದೇ ರೀತಿ ವಿವಿಧ ಸಮಾಜ ಸೇವಕರು ಮತ್ತು ಸಂಘ-ಸಂಸ್ಥೆ ಪದಾಧಿಕಾರಿಗಳು ವರನ ಕಡೆಯವರನ್ನು ಅಭಿನಂದಿಸಿದರು.




ಮಧ್ಯರಾತ್ರಿ ಅಂತ್ಯಸಂಸ್ಕಾರ

ಅಪಘಾತದಲ್ಲಿಮೃತಪಟ್ಟ ಮಂಜುನಾಥ ಗೌಡರ ಅಂತ್ಯಸಂಸ್ಕಾರ ಬನವಾಸಿಯಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ ನೆರವೇರಿತು. ಶವದೊಂದಿಗೆ ಅಲ್ಲಿ ಹೋಗಿ ರುದ್ರಭೂಮಿಯಲ್ಲಿ ಅಂತಿಮ ನಮನ ಸಲ್ಲಿಸಿದ ಬಹುತೇಕ ಸಂಬಂಧಿಕರು ಬೆಳಗ್ಗೆ ಮನೆಗೆ ತೆರಳಿ ಸ್ನಾನ ಇತ್ಯಾದಿ ಕಾರ್ಯ ಮುಗಿಸಿ ಮದುವೆಗೆ ಆಗಮಿಸಿ ತಮ್ಮ ಮಾನವೀಯತೆ ಮೆರೆದರು.




ವರದಿ : ಎನ್ ಡಿ ಹೆಗಡೆ


Leave a Reply

Your email address will not be published. Required fields are marked *