ಆಸ್ಪತ್ರೆಯ ನಿರ್ಲಕ್ಷವೋ.. ಬಡ ಕುಟುಂಬದ ದುರಂತವೋ..?
ಕಾಲು ಕಳೆದುಕೊಳ್ಳುವ ಭೀತಿಯಲ್ಲಿ ಬಾಲೆ.!!!!
ವರದಿ : ರವಿ ಬಿದನೂರು
ಹೊಸನಗರ: ಆಕೆಗಿನ್ನು 7 ವರ್ಷ. ಮನೆಯಂಗಳದಲ್ಲಿ ಆಟ ಆಡಿಕೊಂಡಿದ್ದ ಬಾಲಕಿ ಇದೀಗ ಕಾಲನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾಳೆ. ಇದು ಹೆತ್ತಕರುಳಿಗೆ ಬೆಂಕಿ ಇಟ್ಟಂತಾಗಿದೆ.
ಹೌದು ಇದು ಮೂಡುಗೊಪ್ಪ ಗ್ರಾಪಂ, ಬೈಸೆ ಗ್ರಾಮದ ಸುಳುಗೋಡಿನ ಬಡ ಕುಟುಂಬದ ರೋಧನ ಇದು. ಅಂಬಿಕಾ ಮತ್ತು ಸುಂದರ ದಂಪತಿಗಳ ಮಗಳು ಶ್ರವಂತಿಯ ಇಂದಿನ ಧಾರುಣ ಸ್ಥಿತಿ ಮುಂದೇನು ಅನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಏನಿದು ಘಟನೆ:
ಅಂಬಿಕಾ ಸುಂದರ ರವರ ಮಗಳು ಶ್ರವಂತಿ ಎರಡನೇ ತರಗತಿ ಓದುತ್ತಿದ್ದಾಳೆ. ಆಕೆಗೆ ಮೇ.29 ರಂದು ಜ್ವರ ಕಾಣಿಸಿಕೊಂಡಿದ್ದು ರಾತ್ರಿ ನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ವೈದ್ಯರು ಆರೋಗ್ಯ ತಪಾಸಣೆಯ ಬಳಿಕ ಮಗುವ ಸೊಂಟಕ್ಕೆ ಇಂಜೆಕ್ಷನ್ ನೀಡಿದ್ದಾರೆ. ಬಳಿಕ ಬಾಲಕಿ ಕಾಲು ಊರಲು ಸಾಧ್ಯವಾಗದೇ.. ಅಮ್ಮ ಇರುವೆ ಹರಿದ ಹಾಗೆ ಆಗುತ್ತದೆ ಎಂದು ರೋಧಿಸಿದ್ದಾಳೆ. ಇದು ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ ಮನೆಗೆ ಕರೆದುಕೊಂಡು ಬಂದೆವು ಎಂದು ಪೋಷಕರು ತಿಳಿಸಿದ್ದಾರೆ.
ಕಾಲು ಸ್ವಾಧೀನ ಕಳೆದುಕೊಂಡಿತೇ?
ಆಸ್ಪತ್ರೆಯಿಂದ ಮನೆಗೆ ಬಂದು ರಾತ್ರಿ ಕಳೆದು ಬೆಳಗಾದರೂ.. ಬಾಲಕಿ ಕಾಲು ಊರಲು ಕೇಳುತ್ತಿಲ್ಲ. ಒಂದೇ ಸಮನೇ ರೋದನ. ಇದರಿಂದ ಆತಂಕಗೊಂಡ ತಂದೆತಾಯಿ ಮತ್ತೆ ಆಸ್ಪತ್ರೆಗೆ ಮಗಳನ್ನು ಕರೆತಂದಿದ್ದಾರೆ. ವೈದ್ಯರ ಸೂಚನೆ ಮೇರೆಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ 5 ದಿನ ಚಿಕಿತ್ಸೆ ನೀಡಲಾಗಿತ್ತು. ಆದರೂ ಬಾಲಕಿ ಶ್ರವಂತಿಯ ಕಾಲಿನಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ಮತ್ತೆ ನಗರ ಆಸ್ಪತ್ರೆಗೆ ಬಂದ ಪೋಷಕರು ವೈದ್ಯರಲ್ಲಿ ಮಗಳ ಭವಿಷ್ಯದ ಬಗ್ಗೆ ಅಲವತ್ತುಕೊಂಡಿದ್ದಾರೆ. ಮತ್ತೆ ವೈದ್ಯರ ಸೂಚನೆ ಮೇರೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ 4 ದಿನ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಫಲಕಾರಿಯಾಗದೇ ಬಡ ಕುಟುಂಬ ಚಿಂತೆಗೀಡಾಗಿದೆ.
ಕಮರಿದ ಬಾಲಕಿಯ ಶಿಕ್ಷಣ:
ಜೂನ್.1 ರಿಂದ ಶಾಲೆ ಆರಂಭವಾಗಿದೆ. ಬೈಸೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಉತ್ತೀರ್ಣಗೊಂಡು ಖುಶಿಯಿಂದ ಶಾಲೆಗೆ ಹೋಗುವ ತಯಾರಿಯಲ್ಲಿದ್ದ ಶ್ರವಂತಿ ನಡೆಯಲಾಗದೇ ಮನೆಯಲ್ಲೇ ಕೂರುವಂತಾಗಿದೆ.
ಸರ್ಕಾರಿ ಆಸ್ಪತ್ರೆ ಬಗ್ಗೆ ಆರೋಪ:
ನಲಿದಾಡಿಕೊಂಡಿದ್ದ ಮಗಳು ಶ್ರವಂತಿಗೆ ಜ್ವರ ಬಂದಿದ್ದು ನಿಜ. ಆಸ್ಪತ್ರೆಗೆ ಹೋಗಿದ್ದು ನಿಜ. ವೈದ್ಯರು ಸ್ಪಂದಿಸಿ ಚಿಕಿತ್ಸೆ ನೀಡಿದ್ದರು. ಆಸ್ಪತ್ರೆಗೆ ಒಳ ಹೋಗುವಾಗ ನಡೆದುಕೊಂಡು ಹೋಗಿದ್ದ ಬಾಲಕಿ ವಾಪಾಸು ಬರುವಾಗ ನಡೆಯುತ್ತಿರಲಿಲ್ಲ. ಅವರು ನೀಡಿದ ಇಂಜೆಕ್ಷನ್ ಯಾವುದು, ಚಿಕಿತ್ಸೆ ಹೇಗೆ ಮಾಡಿದ್ದಾರೆ ನಮಗೆ ಗೊತ್ತಿಲ್ಲ. ಆದರೆ ನಂತರ ಬಾಲಕಿಯ ಒಂದು ಕಾಲು ಸ್ವಾಧೀನ ಇಲ್ಲ ಎಂದು ಪೋಷಕರು ಗೋಳಿಡುತ್ತಿದ್ದಾರೆ.
ನಿರ್ಲಕ್ಷ ಮಾಡಿಲ್ಲ:
ಬಾಲಕಿ ಶ್ರವಂತಿಗೆ ಜ್ವರ ಬಂದು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸ್ಪಂದಿಸಿ ಚಿಕಿತ್ಸೆ ನೀಡಲಾಗಿದೆ. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ ತೋರಿಲ್ಲ. ಆದರೆ ಕಾಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬುದು ಗೊತ್ತಿಲ್ಲ. ಆದರೆ ಬಾಲಕಿಯ ಚಿಕಿತ್ಸೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾನು ಟೀಚರ್ ಆಗಬೇಕು:
ನಾನು ಶಾಲೆಗೆ ಹೋಗಬೇಕು. ಓದಬೇಕು.. ಓದಿ ಟೀಚರ್ ಆಗಬೇಕು ಎಂದು ಎಳೆಯ ವಯಸ್ಸಲ್ಲೇ ಹೊಂಗನಸು ಹೊತ್ತ ಶ್ರವಂತಿ.. ಶಾಲೆಗೆ ಹೋಗಲಾಗದೇ 21 ದಿನಗಳಾಗಿವೆ. ನನಗೆ ಸ್ಕೂಲಿಗೆ ಹೋಗ್ಲಿಕ್ಕೆ ಆಗುತ್ತಿಲ್ಲ ಎಂದು ಹೇಳುವಾಗ ಆ ಪುಟ್ಟ ಕಣ್ಣುಗಳಲ್ಲಿ ನೀರು ಜಿನುಗುವಾಗ ಮನ ಕಲಕುತ್ತದೆ.
ಕೆಲಸಕ್ಕೆ ಹೋಗುತ್ತಿಲ್ಲ.. ನಮ್ಮ ಬಳಿ ಹಣವಿಲ್ಲ..!
ಮಗಳು 22 ದಿನದಿಂದ ಮನೆಯಲ್ಲಿದ್ದಾಳೆ. ಕೂಲಿನಾಲಿ ಮಾಡಿದರೇ ಮಾತ್ರ ನಮ್ಮ ಸಂಸಾರ ನಡೆಯಬೇಕು. ಆದರೆ ಮಗಳನ್ನು ಬಿಟ್ಟು ಕೂಲಿಗೆ ಹೋಗಲಾಗುತ್ತಿಲ್ಲ. ದೊಡ್ಡ ಆಸ್ಪತ್ರೆಗೆ ತೋರಿಸೋಣ ಅಂದರೆ ನಮ್ಮ ಬಳಿ ಹಣವಿಲ್ಲ. ಈಗಾಗಲೇ ಸ್ವಸಹಾಯ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದೇವೆ ಎಂದು ಬಡಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಪುಟ್ಟ ಬಾಲಕಿಯ ಬದುಕಿನ ದುರಂತಕ್ಕೆ ವೈದ್ಯರು ನೀಡಿದ ಚಿಕಿತ್ಸೆಯ ಕಾರಣವೋ..? ಬಡವರ ಮೇಲೆಯೇ ವಿಧಿಯ ಅಟ್ಟಹಾಸವೋ ಗೊತ್ತಿಲ್ಲ.. ಹೊಂಗನಸಿನ ಶ್ರವಂತಿ ಬದುಕಿಗೆ ಕೊಳ್ಳಿ ಇಟ್ಟಿರುವುದು ಸತ್ಯ. ಬಾಲಕಿಯ ಬದುಕು ಮೂರಾಬಟ್ಟೆ ಆಗುವ ಮುನ್ನ ಸರ್ಕಾರ ಗಮನಹರಿಸಿ, ಬಾಲಕಿಯ ಭವಿಷ್ಯಕ್ಕೆ ನೀರೆರೆಯ ಬೇಕಿದೆ.
- ನಮಗೆ ಇಬ್ಬರು ಹೆಣ್ಣುಮಕ್ಕಳು ಕಿರಿಯ ಮಗಳು ಶ್ರವಂತಿಗೆ ಜ್ವರ ಬಂದಿದ್ದು ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ವೈದ್ಯರು ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಆ ಬಳಿಕ ನನ್ನ ಮಗಳ ಕಾಲಿನ ಸ್ವಾಧೀನ ತಪ್ಪಿದೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಮಗಳ ಕಾಲು ಮೊದಲಿನಂತಾಗಬೇಕು.
ಅಂಬಿಕಾ ಮತ್ತು ಸುಂದರ್, ತಂದೆ ತಾಯಿ
- ಬಾಲಕಿಯನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಚಿಕಿತ್ಸೆ ನೀಡಲಾಗಿದೆ. ಕರ್ತವ್ಯದಲ್ಲಿ ಲೋಪವಾಗಲಿ.. ನಿರ್ಲಕ್ಷವಾಗಲಿ ತೋರಿಲ್ಲ. ಆದರೂ ಮಾನವೀಯತೆಯಲ್ಲಿ ಬಾಲಕಿಯ ಚಿಕಿತ್ಸೆಗೆ ಕೂಡ ಸ್ಪಂದಿಸಲಾಗಿದೆ.
ಡಾ.ಜಿ.ಬಿ.ಮುರಳಿ
ವೈದ್ಯಾಧಿಕಾರಿ, ನಗರ ಸರ್ಕಾರಿ ಸಂಯುಕ್ತ ಆಸ್ಪತ್ರೆ