ಹೊಸನಗರ ತಾಲೂಕಿನ ನಿಟ್ಟೂರಿನ ಗೌರಿಕೆರೆ ಬಳಿಯಲ್ಲಿ ಹಸುವೊಂದರ ಕಾಲನ್ನು ಕಡಿದು ಹಾಕಿರುವ ಬಗ್ಗೆ ವರದಿಯಾಗಿದೆ.
ದುಷ್ಕರ್ಮಿಗಳ ಕೃತ್ಯ ಇದಾಗಿದ್ದು, ಸಿಡ್ಲಕುಣಿ ಸುಭಾಷ್ ಎಂಬುವವರಿಗೆ ಸೇರಿದ ಹಸುವು ಕಾಲಿಗೆ ಕತ್ತಿಯಿಂದ ಏಟು ತಿಂದು ನಡೆಯಲಾಗದೇ ನರಳಾಡುತ್ತಿದೆ. ಘಟನೆಯಲ್ಲಿ ಕಾಲಿನ ನರ ಕಟ್ ಆಗಿದ್ದರಿಂದ ದನ ನೆಲದಿಂದ ಏಳುತ್ತಿಲ್ಲ.
ಮಲೆನಾಡಲ್ಲಿ ರಾಸುಗಳನ್ನ ಬೆಳಗ್ಗೆ ಹೊರಗೆ ಅಟ್ಟಲಾಗುತ್ತದೆ. ಅವುಗಳು ಮೇವು ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತವೆ.ಸಂಜೆಯಾದರು ಹಸು ಹಟ್ಟಿಗೆ ವಾಪಾಸು ಬರದ ಹಿನ್ನೆಲೆಯಲ್ಲಿ ಸುಭಾಷ್ರವರು ಅದನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಹಸು ನಡೆಯಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಇದೆ ಗೌರೀಕೆರೆಯಲ್ಲಿ ದುಷ್ಕರ್ಮಿಗಳು ಹಸುಗಳನ್ನು ಇನೋವಾ ಕಾರಿನಲ್ಲಿ ತುಂಬಿಕೊಂಡು ಕದ್ದೊಯ್ದ ಪ್ರಕರಣ ನಡೆದಿತ್ತು. ಇದುವರೆಗೂ ಕಳ್ಳತನ ಮಾಡಿದವರು ಯಾರು ಎಂಬುದೇ ಪತ್ತೆಯಾಗಿಲ್ಲ. ಈ ಪ್ರಕರಣ ಹಸಿಯಾಗಿರುವಾಗಲೇ ಮತ್ತೊಂದು ಪ್ರಕರಣ ದಾಖಲಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಸಂಬಂಧಪಟ್ಟ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಹಿಡಿದು, ಮತ್ತೆ ಮತ್ತೆ ಈ ರೀತಿ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದು ಕೇಸ್ ದಾಖಲಾಗಿದೆ ಎನ್ನಲಾಗಿದೆ.