ನಾಳೆ ಶಿವಮೊಗ್ಗದ ಆಯನೂರಿಗೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತಿದ್ದಾರೆ. ಕಾರ್ಯಕ್ರಮಕ್ಕಾಗಿ ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದ ಸುಮಾರು 100 ಎಕರೆ ಜಾಗದಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.
ಮೇ 7ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಆಯನೂರಿಗೆ ಆಗಮಿಸುತ್ತಿದ್ದಾರೆ. ವೇದಿಕೆಯ ಪಕ್ಕದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿಯವರು 50 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ.
ಇನ್ನೂ ಶಿವಮೊಗ್ಗದ ಏಳು ಕ್ಷೇತ್ರ ಹಾಗೂ ದಾವಣಗೆರೆಯ 2 ಮತ್ತು ಚಿಕ್ಕಮಗಳೂರಿನ ಒಂದು ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ನಲ್ಲಿ ತಲ್ಲೀನವಾಗಿದೆ.
ಇನ್ನೂ ನೀತಿಸಂಹಿತೆ ಹಿನ್ನೆಲೆಯಲ್ಲಿ ಮೋದಿ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಯನ್ನು ಕೈಗೊಳ್ಳಲಾಗಿಲ್ಲ. ಕುಡಿಯಲು ನೀರು ಹಾಗೂ ಮಜ್ಜಿಗೆಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಜನರನ್ನ ಕರೆತರಲು ವಾಹನಗಳ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎನ್ನುತ್ತಿದ್ದಾರೆ ಮುಖಂಡರು.
ಆಯನೂರಿನಿಂದ ಶಿವಮೊಗ್ಗ ಕಡೆ ಬರುವ 2 ಕಿಮೀ. ಹಾಗೂ ಆಯನೂರಿನಿಂದ ಕುಂಸಿಗೆ ಹೋಗುವ 1 ಕಿಮೀ. ರಸ್ತೆ ಉದ್ದಕ್ಕೂ ಮೋದಿ ಕಾರ್ಯಕ್ರಮಕ್ಕಾಗಿ ಬ್ಯಾನರ್ ಬಂಟಿಂಗ್ಸ್ ಪ್ಲೆಕ್ಸ್ಗಳನ್ನು ಹಾಕಲಾಗುತ್ತಿದೆ. ಕೇಸರಿ ಬಣ್ಣಗಳ ತಳಿರು ತೋರಣಗಳಲ್ಲಿ ಸಿಂಗಾರಗೊಳ್ಳುತ್ತಿರುವ ಆಯನೂರಿನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯ ಕೊನೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.