Headlines

ಚೋರಡಿ ಅಪಘಾತ – ಮತ್ತೊಬ್ಬ ಗಾಯಾಳು ಸಾವು | ನಿನ್ನೆ ಕರ್ತವ್ಯ ಪ್ರಜ್ಞೆ ಮೆರೆದ ಜಿಲ್ಲೆಯ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು – ಅಪಘಾತದ ಸಂಪೂರ್ಣ ಮಾಹಿತಿ

ನಿನ್ನೆ ಚೋರಡಿಯಲ್ಲಿ  ಸಂಭವಿಸಿದ ಭೀಕರ ಅಪಘಾತದ ಘಟನೆಯಲ್ಲಿ ಸಾವನ್ನಪ್ಪಿರುವ ಸಂಖ್ಯೆ ಮೂರಕ್ಕೆ ಏರಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಇವತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ಧಾರೆ. 

ನಿನ್ನೆ ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇವತ್ತು ಶಿಕಾರಿಪುರ ತಾಲೂಕಿನ ಜೋಗಿಹಳ್ಳಿ ಗ್ರಾಮದ ಮಹೇಶ್ (45 ವರ್ಷ) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.




ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಹಿಂದಿನಿಂದಲೂ ಡೇಂಜರಸ್​ ಸ್ಪಾಟ್. ಹಳೇಸೇತುವೆ ಪಕ್ಕದಲ್ಲಿ ಅಗಲವಾದ ಹೊಸಸೇತುವೆ ಕಟ್ಟಿ, ಹೈವೆ ಮಾಡಿದರೂ ಇಲ್ಲಿ ಅಪಘಾತ ತಪ್ಪಿಲ್ಲ. ಹತ್ತಿರದಲ್ಲಿಯೇ ಚೌಡೇಶ್ವರಿಯ ಗುಡಿಯಿದೆ. ಆ ತಾಯಿ ಆಶೀರ್ವಾದದ ಹೊರತಾಗಿ, ನಿನ್ನೆ ಭೀಕರ ಬಸ್ ಅಪಘಾತವೊಂದು ಸಂಭವಿಸಿದೆ. 

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಹಾಗೂ ಅದೇ ಸಮಯದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬರುತ್ತಿದ್ದ ಖಾಸಗಿ ಬಸ್​ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಎರಡು ಬಸ್​ಗಳು ಅರ್ಧಕರ್ಧ ಒಂದರೊಳಗೆ ಒಂದು ಹೋಗಿದ್ದವು ಅಂದರೆ, ಅದೆಷ್ಟು ಸ್ಪೀಡ್​ನಲ್ಲಿ ಬಸ್​ಗಳು ಡಿಕ್ಕಿಯಾಗಿರಬಹುದು ಎಂಬುದನ್ನ ನೀವೇ ಯೋಚಿಸಿ ನೋಡಿ. ಎರಡು ಬಸ್​ಗಳನ್ನ ಬೇರ್ಪಡಿಸಲು ಜೆಸಿಬಿಯೇ ಬರಬೇಕಾಯ್ತು. 

ಸಮಯ ಪ್ರಜ್ಞೆ ಮೆರೆದ 108 ಆಂಂಬುಲೆನ್ಸ್ ಸಿಬ್ಬಂದಿಗಳು

ಅಪಘಾತ ವಿಷಯ ತಿಳಿಯುತಿದ್ದಂತೆ ರಿಪ್ಪನ್‌ಪೇಟೆ 108 ಸಿಬ್ಬಂದಿಗಳಾದ ಯಲ್ಲಪ್ಪ ,ಲಕ್ಷ್ಮಣ್ ಹೊಸನಗರ 108 ಸಿಬ್ಬಂದಿಗಳಾದ ವೆಂಕಟೇಶ್ ,ಬಾಲಚಂದ್ರ ಕಾರ್ಗಲ್ 108 ಸಿಬ್ಬಂದಿಗಳಾದ ಜೋಸೇಫ್ ,ಪ್ರಜ್ವಲ್ ಮತ್ತು ಸಾಗರ 108 ಸಿಬ್ಬಂದಿಗಳಾದ ಹರೀಶ್, ವೀರಭದ್ರಪ್ಪ ಮತ್ತು ಶಿವಮೊಗ್ಗ 108 ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ತಮ್ಮ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಕುಮದ್ವತಿ ಸೇತುವೆ ಬಳಿ ಸಂಭವಿಸಿದ ಅಪಘಾತದ ಬೆನ್ನಲ್ಲೆ ಇಡೀ ಶಿವಮೊಗ್ಗ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಆ್ಯಂಬುಲೆನ್ಸ್​ ಚಾಲಕರು ಹಾಗೂ ಸ್ಥಳೀಯರು, ಜನಪ್ರತಿನಿಧಿಗಳು ಅಷ್ಟೆಯೇಕೆ ದಾರಿಯಲ್ಲಿ ಸಾಗುತ್ತಿದ್ದ ಕಾರಿನ ಮಾಲೀಕರು ಸಹ ನಿನ್ನೆಯ ಘಟನೆಯಲ್ಲಿ ನೆರವಿಗೆ ನಿಂತಿದ್ದರು. ಒಂದು ಜೀವವನ್ನು ಉಳಿಸಲು ಕೇವಲ ಅರ್ಧಗಂಟೆಯ ಹೊತ್ತಿನಲ್ಲಿ ನಡೆಸಿದ ಪ್ರಯತ್ನಗಳು ನಿಜಕ್ಕೂ ವಿಶೇಷವಾಗಿತ್ತು.. 




ನಿನ್ನೆ ಸಂಜೆ ಆರು ಗಂಟೆಯ ಮೇಲೆ ಕೆಲ ನಿಮಿಷಗಳು ಕಳೆದಿದ್ದವು, ಆ ಕಡೆ ಹಿತ್ಲಾ ದಾಟಿಕೊಂಡು ಕಟ್ಟಿಗೆಹಳ್ಳ, ಮರಾಠಿ ಕ್ಯಾಂಪ್ ಮೂಲಕ ಚೋರಡಿಗೆ ಬಂದಿದ್ದ ಬಸ್​ ಶಿವಮೊಗ್ಗದ ಕಡೆಗೆ ಹೊರಟಿತ್ತು. ಬಸ್​ ಓವರ್​ ಸ್ಪೀಡ್​ನಲ್ಲಿತ್ತು, ಚಾಲಕ ಅರುಣ್​ ಗಡಿಬಿಡಿಯಲ್ಲಿದ್ದ. ಏಳು ಗಂಟೆಗೆಲ್ಲಾ ಶಿವಮೊಗ್ಗ ಮುಟ್ಟುವ ಆತುರದಲ್ಲಿದ್ದ. 

ಪ್ರತ್ಯಕ್ಷ ದರ್ಶಿ ಹೇಳಿದ್ದೇನು?

ನಿನ್ನೆಯು ಸಹ ಆಕ್ಸಿಡೆಂಟ್​ ಸಂಭವಿಸಿದೆ. ಚೋರಡಿಯ ಬಳಿ ನಡೆದ ಅಪಘಾತದ ಘಟನೆಯನ್ನು ಪ್ರತ್ಯಕ್ಷ ದರ್ಶಿ ಹಾಗು ಗಾಯಾಳು ಒಬ್ಬರು ವಿವರಿಸಿದ್ದಾರೆ ಅವರು ಹೇಳುವ ಪ್ರಕಾರ, ಶಿಕಾರಿಪುರದಿಂದ ಬರುತ್ತಿದ್ದ ಬಸ್ ಸಂಜೆ ಏಳು ಗಂಟೆಯೊಳಗೆ ಶಿವಮೊಗ್ಗ ತಲುಪಬೇಕಿತ್ತಂತೆ. ಆ ಕಾರಣಕ್ಕೆ ಹಿತ್ಲಾ ದಾಟುತ್ತಲೇ ಚಾಲಕ ಓವರ್ ಸ್ಪಿಡ್​​ ನಲ್ಲಿ ಬಸ್ ಚಲಾಯಿಸಿದ್ದಾನೆ.ಕುಮದ್ವತಿ ಸೇತುವೆಯ ಬಳಿ ಓವರ್​ ಟೇಕ್​ ಮಾಡುತ್ತಿದ್ದಾಗ ಎದುರಿನಿಂದ ಇನ್ನೊಂದು ಬಸ್​ ಬಂದಿದೆ. ಗಾಡಿ ಕಂಟ್ರೋಲ್​ಗೆ ಸಿಗಲಿಲ್ಲ. ಎದುರಿನ ಬಸ್​ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಕ್ಸಿಡೆಂಟ್ ಆಗಿದೆ ಎನ್ನುತ್ತಾರೆ. 


ಘಟನೆಯೊಂದು ನಡೆದೋಯ್ತು, ಎರಡು ಬಸ್​ಗಳು ಒಂದಕ್ಕೊಂದು ಸುಮಾರು 8-9 ಅಡಿ ಒಳಕ್ಕೆ ಹೋಗಿ ಸಿಲುಕಿಕೊಂಡಿದೆ. ಡ್ರೈವರ್​ ಬಸ್​ನಲ್ಲಿಯೇ ನರಳಾಡ್ತಿದ್ದಾರೆ.  ಎರಡು ಬಸ್​ಗಳಲ್ಲಿ ಬರೋಬ್ಬರಿ ಜನರು. ಎಲ್ಲರಿಗೂ ಪೆಟ್ಟಾಗಿದೆ. ಚೋರಡಿ ಊರಿನವರು ಎದ್ನೋ ಬಿದ್ನೋ ಅಂತಾ ಮೊದಲು ಓಡಿ ಬಂದು ನೋಡುತ್ತಾರೆ. ಆದರೆ, ಅವರಿಗೆ ಕೈ ಕಾಲು ಆಡುವುದಿಲ್ಲ. ಏಕೆಂದರೆ, ಯಾರನ್ನ ಅಂತಾ ಕಾಪಾಡೋದು! ಏನು ಮಾಡೋದು ಒಂದು ಗೊತ್ತಾಗುತ್ತಿಲ್ಲ… ಶಿವ..ದೇವಾ ಅಂದುಕೊಂಡು ಸಿಕ್ಕವರಿಗೆಲ್ಲಾ ಫೋನಾಯಿಸುತ್ತಾರೆ. 

ಅಷ್ಟರಲ್ಲಿ ಅಲ್ಲಿದ್ದ ಸ್ಥಳೀಯರು ಗಾಯಾಳುಗಳಿಗೆ ತಮ್ಮ ಗೊತ್ತಿರುವ ರೀತಿಯಲ್ಲಿ ಆರೈಕೆಯಲ್ಲಿ, ಸಿಕ್ಕ ಕಾರಿನಲ್ಲಿ ಶಿವಮೊಗ್ಗ ಕಳುಹಿಸಲು ಆರಂಭಿಸಿದ್ದರು. ಇನ್ನೊಂದೆಡೆ ಸಾಲು ಸಾಲು ಆ್ಯಂಬುಲೆನ್ಸ್​ಗಳು ಸ್ಥಳಕ್ಕೆ ಬರುತ್ತಲೇ  ಗಾಯಾಳುಗಳನ್ನು ಅದರಲ್ಲಿ ಶಿವಮೊಗ್ಗಕ್ಕೆ ರವಾನಿಸುವ ಕೆಲಸ ಆರಂಭವಾಯ್ತು. ಆ್ಯಂಬುಲೆನ್ಸ್​ ಸಂಖ್ಯೆ ಕಡಿಮೆಯಾಗುತ್ತೆ ಎಂದು ಅನಿಸುವಾಗಲೇ ಖಾಸಗಿ ಆ್ಯಂಬುಲೆನ್ಸ್​ಗಳು ಚೋರಡಿಯತ್ತ ದೌಡಾಯಿಸಿದವು.  20-30 ನಿಮಿಷದಲ್ಲಿ ಚೋರಡಿಯಿಂದ ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್​ಗೆ ಶಿಪ್ಟ್ ಆಗಿದ್ದರು. 

ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಷಯ ತಿಳಿಯುತ್ತಲೇ ಮಾರ್ನಿಂಗ್​ ಶಿಫ್ಟ್​ ಸಿಬ್ಬಂದಿಯನ್ನು ಸಹ ಮನೆಗೆ ತೆರಳದಂತೆ ಇರಿಸಿಕೊಳ್ಳಲಾಗಿತ್ತು. ವಿಶೇಷ ವೈದ್ಯರ ತಂಡ ತುರ್ತು ಚಿಕಿತ್ಸೆಗೆ ಬೇಕಿದ್ದ ಎಲ್ಲಾ ವ್ಯವಸ್ಥೆಗಳನ್ನು  ಮಾಡಿಕೊಂಡಿತು. ಆಸ್ಪತ್ರೆಗೆ ಆ್ಯಂಬುಲೆನ್ಸ್ ವಾಹನ ಬರುತ್ತಲೆ ಅಲ್ಲಿದ್ದ ಸಾರ್ವಜನಿಕರು ಸಹ ಗಾಯಾಳುಗಳನ್ನ ಆಸ್ಪತ್ರೆಯೊಳಗೆ ಶಿಫ್ಟ್ ಮಾಡಲು ನೆರವಾದರು. 

 ಅಶೋಕ್​ ನಾಯ್ಕ್​. ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ, ಸೇರಿದಂತೆ ಹಲವರು ಆಸ್ಪತ್ರೆಗೆ ಬಂದು ಏನಾಗಬೇಕು ಅಂತಾ ವಿಚಾರಿಸಿದ್ರು. ರೋಗಿಗಳ ಬಳಿ ಅವರ ಪೂರ್ವ ಪರ ವಿಚಾರಿಸಿ ಅವಶ್ಯಕತೆ ಇರುವ ವ್ಯವಸ್ಥೆಯನ್ನು ಕಲ್ಪಿಸಲು ಪ್ರಯತ್ನಿಸಿದ್ರು. 

ಇನ್ನೂ ಖಾಸಗಿ ಬಸ್​ಗಳು ಡಿಕ್ಕಿಯಾಗಿವೆ ಬಹಳಷ್ಟು ಜನರು ಸಾವನ್ನಪ್ಪಿರುವ ಶಂಕೆ ಎಂಬ ಸುದ್ದಿಗಳು ಹರಿದಾಡುತ್ತಲೇ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಹಾಗೂ ಎಸ್​​ಪಿ ಮಿಥುನ್ ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮುಖ್ಯವಾಗಿ ಪಾನಿಕ್ ಮೂಮೆಂಟ್​ನ್ನ ಸರಿಪಡಿಸಲು ನಿರ್ದಿಷ್ಟ ಮಾಹಿತಿಯನ್ನ ಎಸ್​ಪಿ ಮಿಥುನ್ ಕುಮಾರ್​ ಪೊಲೀಸ್ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಪತ್ರಕರ್ತರಿಗೆ ತಿಳಿಸಿದರು.  ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ರಕ್ಷಣಾ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದ್ಧಾರೆ.  ಮುಖ್ಯವಾಗಿ ಸ್ಥಳಕ್ಕೆ ಜೆಸಿಬಿ ತರಿಸಿ,  ಕಾರ್ಯಾಚರಣೆ ಆರಂಭಿಸಿದ್ಧಾರೆ. ಎಸ್​ಪಿ ಮಿಥುನ್ ಕುಮಾರ್​ ಒಂದು ಕಡೆ ಘಟನೆಯ ಸಾವು ನೋವಿನ ಬಗ್ಗೆ ಸ್ಪಷ್ಟನೆ ನೀಡುವುದರ ಜೊತೆ ಆ್ಯಂಬುಲೆನ್ಸ್​ ಗಳಲ್ಲಿ ಗಾಯಾಳುಗಳ ರವಾನೆಗೆ ಗಮನ ಕೊಟ್ಟಿದ್ದರು.  ಜಿಲ್ಲಾಧಿಕಾರಿ ಸೆಲ್ವಮಣಿಯವರು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಗಾಯಾಗಳಿಗೆ ಯಾವುದರ ಅಡಿಯಲ್ಲಿ ಉಚಿತ ನೆರವು ಕೊಡಲು ಸಾಧ್ಯ ಎಂಬುದನ್ನ ನೋಡಿಕೊಂಡು ಅಧಿಕಾರಿಗಳಿಗೆ ಆ ನಿಟ್ಟಿನಲ್ಲಿ ತಕ್ಷಣ ಕ್ರಮವಹಿಸಿ ಎಂದು ಸೂಚನೆ ನೀಡುತ್ತಿದ್ರು. 




ಘಟನೆ ಆದ ಬೆನ್ನಲ್ಲೆ ಆ್ಯಂಬುಲೆನ್ಸ್​ ಕಳಿಸಿದ್ದರಿಂದಲೋ? ತುರ್ತು ವಾಹನಗಳ ಚಾಲಕರು ತಮ್ಮ ಜೀವದ ಹಂಗು ತೊರೆದು ಕೆಲ ನಿಮಿಷಗಳ ಅಂತರದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರಿಂದಲೋ? ಮೆಗ್ಗಾನ್ ವೈದ್ಯರು, ನರ್ಸ್​ , ಸಿಬ್ಬಂದಿಗಳ ಮುತುವರ್ಜಿಯಿಂದಲೋ? ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಕ್ವಿಕ್ ಆ್ಯಕ್ಷನ್​ನಿಂದಲೋ? ದೊಡ್ಡದಾಗಬಹುದಿದ್ದ ದುರಂತ ಚಿಕ್ಕದರಲ್ಲಿ ಮುಗಿದಿದೆ,..






Leave a Reply

Your email address will not be published. Required fields are marked *