ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹರತಾಳು ಹಾಲಪ್ಪನವರು ಇಂದು ತಮ್ಮ ನಾಮಪತ್ರ ಸಲ್ಲಿಸಿದರು.
ಹೊಳೆಕೊಪ್ಪದ ಧನಾಂಜನೇಯಸ್ವಾಮಿ ದೇವಸ್ತಾನದಲ್ಲಿ ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ಹಾಲಪ್ಪನವರು ನಂತರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರೆವಣಿಗೆ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ಕಾಗೋಡು ಪುತ್ರಿ ರಾಜನಂದಿನ ಜೊತೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೇರಿಸುವ ಮೂಲಕ ಹಾಲಪ್ಪ ಶಕ್ತಿ ಪ್ರದರ್ಶನ ಮಾಡಿದರು.
ಸಾಗರದಲ್ಲಿ ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಕೆ ವೇಳೆ ಭಾರಿ ಜನಸ್ತೋಮ ನೆರೆದಿದ್ದು ಎದುರಾಳಿಗಳಿಗೆ ಸಂದೇಶ ನೀಡುವಂತಿತ್ತು.
2004 ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜೊತೆ ಬಿಜೆಪಿ ಸೇರಿ ಹೊಸನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಪ್ಪನವರು ಬಂಗಾರಪ್ಪನವರು ಬಿಜೆಪಿಯನ್ನು ತೊರೆದರೂ ಹಾಲಪ್ಪ ಮಾತ್ರ ಬಿಜೆಪಿಯಲ್ಲೆ ಉಳಿದು 2008 ರ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರೂ ಆಗಿದ್ದರು. 2013 ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಹಾಲಪ್ಪ ಅವರು ಯಡಿಯೂರಪ್ಪ ಅವರನ್ನು ಹಿಂಬಾಲಿಸುತ್ತಾ ಬಿಜೆಪಿಗೆ ಮರಳಿದರಲ್ಲದೆ 2018 ರ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದರು. ಇದೀಗ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ.