ಕಾಂಗ್ರೆಸ್ ಮೂರನೆ ಪಟ್ಟಿಯಲ್ಲಿ ಇಬ್ಬರು ಮಾಜಿ ಶಾಸಕರ ಮಕ್ಕಳಿಬ್ಬರಿಗೆ ಅದೃಷ್ಟ ಒಲಿದಿದೆ. ತೀವ್ರ ಕುತೂಹಲ ಕೆರಳಿಸಿರುವ ಎರಡು ಕ್ಷೇತ್ರಗಳಲ್ಲಿ ಇವರನ್ನು ಕಣಕ್ಕಿಳಿಸಲಾಗಿದೆ. ಶಿಕಾರಿಪುರದಲ್ಲಿ ಗೋಣಿ ಮಾಲ್ತೇಶ್ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.
ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಕುರಿತು ತೀವ್ರ ಕುತೂಹಲ ಮೂಡಿತ್ತು. ಹಲವು ಲೆಕ್ಕಾಚಾರ, ಊಹಾಪೋಹ, ಲಾಬಿಗಳು ಕೂಡ ನಡೆದಿದ್ದವು. ಮೂರನೇ ಪಟ್ಟಿಯಲ್ಲಿ ಈ ಕುತೂಹಲಗಳಿಗೆ ತೆರೆ ಬಿದ್ದಿದೆ.
ಶಿವಮೊಗ್ಗದಿಂದ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪುತ್ರ ಹೆಚ್.ಸಿ.ಯೋಗೇಶ್ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಹೆಚ್.ಎಂ.ಚಂದ್ರಶೇಖರಪ್ಪ ಅವರು 1999ರಲ್ಲಿ ಶಿವಮೊಗ್ಗದ ಶಾಸಕರಾಗಿದ್ದರು. ಹೆಚ್.ಸಿ.ಯೋಗೇಶ್ ಅವರು ಕೂಡ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈಗ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಶ್ರೀನಿವಾಸ್ ಕರಿಯಣ್ಣ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇವರ ತಂದೆ ಕರಿಯಣ್ಣ ಅವರು ಶಿವಮೊಗ್ಗ ನಗರಸಭೆ ಸದಸ್ಯರಾಗಿದ್ದರು. 1989 ಮತ್ತು 1999ರಲ್ಲಿ ಹೊಳೆಹೊನ್ನೂರು ಕ್ಷೇತ್ರದಿಂದ ಶಾಸಕರಾಗಿದ್ದರು. ತಂದೆಯ ಅಪೇಕ್ಷೆಯಂತೆ, ವೈದ್ಯ ವೃತ್ತಿಗೆ ಶ್ರೀನಿವಸ್ ಕರಿಯಣ್ಣ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯ ಆರಂಭಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಈ ಭಾರಿ ಪಕ್ಷ ಪುನಃ ಶ್ರೀನಿವಾಸ್ ಕರಿಯಣ್ಣ ಅವರನ್ನು ಕಣಕ್ಕಿಳಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಗೋಣಿ ಮಾಲ್ತೇಶ್ ಅವರು ತೀವ್ರ ಪೈಪೋಟಿ ಒಡ್ಡಿದ್ದರು. ಯಡಿಯೂರಪ್ಪ ಅವರು 86,983 ಪಡೆದುಕೊಂಡರೆ, ಕಾಂಗ್ರೆಸ್ ಪಕ್ಷದ ಗೋಣಿ ಮಾಲ್ತೇಶ್ ಅವರು 51,586 ಮತಗಳನ್ನು ಪಡೆದಿದ್ದರು. ಈ ಬಾರಿ ಪುನಃ ಅವರನ್ನೆ ಕಾಂಗ್ರೆಸ್ ಕಣಕ್ಕಿಳಿಸಿದೆ.
ಒಟ್ಟಾರೆಯಾಗಿ ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಚುನಾವಣೆ ರಂಗೇರಿದೆ.