ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರ (Karnataka assembly election 2023)ಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೆಳಗಿನಂತಿದೆ.
ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ
ಆರಗ ಅವರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಏರಿಕೆಯಾಗಿದೆ. ₹6.28 ಕೋಟಿ ಆಸ್ತಿ ಘೋಷಿಸಿದ್ದಾರೆ. 20 ಎಕರೆ ಜಮೀನು ಇದೆ, ಮೂರು ಕಾರು, ಪತ್ನಿ ಬಳಿ 250 ಗ್ರಾಂ ಚಿನ್ನವಿದೆ.
ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ
ಕಿಮ್ಮನೆ ರತ್ನಾಕರ್ ಅವರು ಸರಳವಾಗೇ ಬಂದು ನಾಮಪತ್ರ ಸಲ್ಲಿಸಿದ್ದು, ಅವರು ಘೋಷಿಸಿಕೊಂಡಿರುವಂತೆ, ₹3.75 ಕೋಟಿ ಆಸ್ತಿ ಇದ್ದು, ₹3.71 ಕೋಟಿ ಸಾಲವಿದೆ. ಬಹುತೇಕ ಆಸ್ತಿಯಷ್ಟೇ ಸಾಲ ಇವರಿಗಿದೆ. ಸ್ಥಿರಾಸ್ತಿ ₹3 ಕೋಟಿ, ಪತ್ನಿ ಹೆಸರಿನಲ್ಲಿ ₹2.20 ಕೋಟಿ ಸ್ಥಿರಾಸ್ತಿ ಇದೆ.
ಕೆ.ಬಿ.ಅಶೋಕ್ ನಾಯ್ಕ್, ಶಿವಮೊಗ್ಗ ಗ್ರಾ. ಬಿಜೆಪಿ ಅಭ್ಯರ್ಥಿ
₹12.12 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಘೋಷಿಸಿಕೊಂಡಿರುವಂತೆ ₹7.63 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಎರಡು ಕಾರು, ಎರಡು ದ್ವಿಚಕ್ರ ವಾಹನಗಳಿವೆ. ₹2.26 ಕೋಟಿ ಸಾಲ ಇದೆ.
ಶಾರದಾ ಪೂರ‌್ಯಾನಾಯ್ಕ್, ಶಿವಮೊಗ್ಗ ಗ್ರಾ. ಜೆಡಿಎಸ್ ಅಭ್ಯರ್ಥಿ
ಐದು ವರ್ಷದ ಹಿಂದೆ ₹5.16 ಕೋಟಿ ಆಸ್ತಿ ಘೋಷಿಸಿದ್ದರು. ಆದರೆ, ಈ ಚುಮಾವಣೆಯಲ್ಲಿ ಘೋಷಿಸಿಕೊಂಡಿರುವಂತೆ ₹3 ಕೋಟಿ ಆಸ್ತಿ ಇದೆ. ಐದು ವರ್ಷಗಳಲ್ಲಿಇವರ ಆಸ್ತಿಯಲ್ಲಿ ₹2.16 ಕೋಟಿ ಕಡಿಮೆಯಾಗಿದೆ. ₹1.39 ಕೋಟಿ ಸಾಲವಿದೆ. ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ ಇದೆ. ಟ್ರಾಕ್ಟರ್, ದ್ವಿಚಕ್ರ ವಾಹನವಿದೆ.
ಬಿ.ಕೆ.ಸಂಗಮೇಶ್ವರ್, ಭದ್ರಾವತಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ
ಒಟ್ಟು ಆಸ್ತಿ ₹6.69 ಕೋಟಿ ಇದೆ. ಇದು 2018ರ ಚುನಾವಣೆಯಲ್ಲಿ ₹3.07 ಕೋಟಿ ಇತ್ತು. ಇವರು 12 ಎಕರೆ ಅಡಿಕೆ ತೋಟ, 1 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಆಭರಣ ಹೊಂದಿದ್ದಾರೆ. ₹2.83 ಕೋಟಿ ಸಾಲವಿದೆ.
ಶಾರದಾ ಅಪ್ಪಾಜಿಗೌಡ, ಭದ್ರಾವತಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ
₹4.73 ಕೋಟಿ ಆಸ್ತಿ ಘೋಷಣೆ. 2018ರಲ್ಲಿ ₹3.52 ಆಸ್ತಿ ಘೋಷಿಸಿಕೊಂಡಿದ್ದರು. ಇವರ ಬಳಿ 3 ಕಾರು, ಐದು ಲಾರಿ ಇವೆ. ₹97.85 ಲಕ್ಷ ಸಾಲವಿದೆ.
ಬಿ ವೈ ವಿಜಯೇಂದ್ರ ಶಿಕಾರಿಪುರ ಬಿಜೆಪಿ ಅಭ್ಯರ್ಥಿ
47 ವರ್ಷದ ವಿಜಯೇಂದ್ರ ಅವರು 46.82 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 7.85 ಕೋಟಿ ಮೌಲ್ಯದ ಚರಾಸ್ತಿಯ ಒಡತಿಯಾಗಿದ್ದಾರೆ. ಇನ್ನು ಈ ದಂಪತಿ ಬಳಿ ಪ್ರಸ್ತುತ 70.11 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ನಾಮಪತ್ರದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇನ್ನು ವಿಜಯೇಂದ್ರ ಒಟ್ಟು 1.75 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಹೊಂದಿದ್ದಾರೆ. ದಂಪತಿ ಬಳಿ ಒಟ್ಟು 2.29 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇವೆ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ ಇದ್ದರೆ, ಅವರ ಪತ್ನಿ 1.25 ಕೆಜಿ ಚಿನ್ನಾಭರಣಗಳನ್ನು ಹೊಂದಿದ್ದಾರೆ.
ಶಿಕಾರಿಪುರದಲ್ಲಿ ಕೃಷಿ ಭೂಮಿ, ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಹಾಗೇ ಏಳು ಮನೆಗಳ್ನು ಹೊಂದಿದ್ದಾರೆ. ಇನ್ನು ತಮ್ಮ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ. ಲಂಚ ಆರೋಪದ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೆ, ಮತ್ತೊಂದು ಪ್ರಕರಣ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದು ಎಂದು ತಿಳಿಸಿದ್ದಾರೆ.