ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಹೊಸನಗರ ಪಟ್ಟಣ ವ್ಯಾಪ್ತಿಯ ದಿ|| ಪ್ರಕಾಶ್ ಹಾಗೂ ಆಶಾ ದಂಪತಿಗಳ ಪುತ್ರ ಆದರ್ಶ (23) ಗಾಯಗೊಂಡಿರುವ ಬೈಕ್ ಸವಾರ. ತನ್ನ ಸ್ನೇಹಿತನನ್ನು ಹಿಂಭಾಗದಲ್ಲಿ ಕೂರಿಸಿಕೊಂಡು ಬೈಕಿನಲ್ಲಿ ಸವಾರಿ ಮಾಡಿಕೊಂಡು ಹೋಗುವಾಗ ಸೊನಲೆ – ತೀರ್ಥಹಳ್ಳಿ ರಸ್ತೆಯಲ್ಲಿ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿ ಹೊಡೆದಿದೆ. ಅಪಘಾತದ ರಭಸಕ್ಕೆ ತಲೆಗೆ ಪೆಟ್ಟುಬಿದ್ದಿದ್ದು, ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಮೆದುಳಿಗೆ ಗಂಭೀರ ಗಾಯವಾಗಿದ್ದು ಚೇತರಿಸಿಕೊಳ್ಳುವ ಸಂಭವ ತೀರಾ ಕಡಿಮೆ ಇರುವ ಕಾರಣಕ್ಕೆ ಗಾಯಾಳುವನ್ನು ವೈದ್ಯರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.
ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.