ಶಿವಮೊಗ್ಗ: ಬೆಂಗಳೂರಿನಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ರೈಲ್ವೆ ಬೋಗಿಯಲ್ಲಿ ಶೌಚಾಲಯದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ದುರ್ದೈವಿ ಅಶೋಕ್ ಚೌಧರಿ ಅವರು ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಅಸ್ಸೋಂ ಮೂಲದವರಾಗಿದ್ದ ಅಶೋಕ್ ಚೌಧರಿ ಅವರು ಅಸ್ಸೋಂ ನಿಂದ ಬೆಂಗಳೂರಿಗೆ ಬಂದಿದ್ದ ತಮ್ಮ ಹೆಂಡತಿ ಹಾಗೂ ಮಕ್ಕಳನ್ನು ಕರೆ ತರಲು ನಿನ್ನೆ ಬೆಳಗ್ಗೆ ಶಿವಮೊಗ್ಗ-ಯಶವಂತಪುರದ ಇಂಟರಸಿಟಿ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ರೈಲಿನಲ್ಲಿಯೇ ಶೌಚಾಲಯಕ್ಕೆ ತೆರಳಿದ ಅಶೋಕ್ ಅವರು ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದಿದ್ದಾರೆ.
ಇಂಟರಸಿಟಿ ರೈಲು ಇಂದು ಬೆಳಗ್ಗೆ ಯಶವಂತಪುರವನ್ನು ಬಿಟ್ಟು ಮಧ್ಯಾಹ್ನ ಶಿವಮೊಗ್ಗ ತಲುಪಿದ್ದು. ಈ ವೇಳೆ ರೈಲು ಸ್ವಚ್ಛಗೊಳಿಸುವ ಸಿಬ್ಬಂದಿ ಸ್ವಚ್ಛತೆ ಮಾಡಲು ಹೋದಾಗ ಎಸಿ ರೂಮ್ನ ಶೌಚಾಲಯವು ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಅಶೋಕ್ ಚೌಧರಿ ಮೃತಪಟ್ಟಿದ್ದರು.
ಮೃತದೇಹವನ್ನು ರೈಲ್ವೆ ಪೊಲೀಸರು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.