ಭ್ರಷ್ಟಾಚಾರ ನಡೆಸಿ ಜಾಮೀನಿನ ಮೇಲಿರುವ ನಾಯಕರು ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ – ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ. ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು.
ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ ಕಾರ್ಮಿಕರ ಮಕ್ಕಳಿಗೆ ಕಿಟ್ ವಿತರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರ ಭ್ರಷ್ಟಾಚಾರಿಗಳ ಪರವಾಗಿಲ್ಲ. ಯಾರೇ ಇರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಲೋಕಾಯುಕ್ತವನ್ನು ಸಿದ್ದರಾಮಯ್ಯನವರ ಕಾಲದಲ್ಲಿ ಕುತ್ತಿಗೆ ಹಿಚುಕಿ ಇಟ್ಟಿದ್ದರು ಯಾಕೆಂದರೆ ಅವರ ಮೇಲೆ 69 ಕೇಸ್ ಇತ್ತು ಹಾಗಾಗಿ ಲೋಕಾಯುಕ್ತ ಮುಗಿಸಿ ಎ.ಸಿ.ಬಿ ಮಾಡಿದರು. ನಾವು ಕೋರ್ಟ್ ಆದೇಶದಿಂದಾಗಿ ದೇಶ ಭ್ರಷ್ಟಾಚಾರ ಮುಕ್ತ ಮಾಡಲು ಲೋಕಾಯುಕ್ತವನ್ನು ಗಟ್ಟಿ ಮಾಡಿದ್ದೇವೆ ಎಂದರು.
ಪೊಲೀಸ್ ಇಲಾಖೆಗೆ ಅವರು ಕೇಳಿದ ಹಾಗೆ ಒಳ್ಳೊಳ್ಳೆ ಆಫೀಸರ್ ಗಳನ್ನು ಕೊಟ್ಟಿದ್ದೇವೆ. ಲೋಕಾಯುಕ್ತ ಚೆನ್ನಾಗಿದ್ದರೆ ಭ್ರಷ್ಟಾಚಾರ ಮುಕ್ತ ಸಮಾಜವಾಗುತ್ತೆ ಎನ್ನುವ ನಂಬಿಕೆ ಇದೆ. ಯಾರೇ ಆದರೂ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ರೀತಿಯಲ್ಲಿ ಪಾರದರ್ಶಕ ಕೆಲಸವನ್ನು ಲೋಕಾಯುಕ್ತ ಮಾಡುತ್ತಿದೆ. ಸರ್ಕಾರ ಇದರಲ್ಲಿ ಪ್ರವೇಶ ಮಾಡಿಲ್ಲ,ಸರ್ಕಾರದ ಹಸ್ತ ಕ್ಷೇಪ ಇಲ್ಲ ಎಂದರು.
ಮಾಡಾಳ್ ವಿರೂಪಾಕ್ಷಪ್ಪನವರ ಬಂಧನ ಇನ್ನು ಆಗಿಲ್ಲ ಎಂಬ ಪ್ರೆಶ್ನೆಗೆ ಅವರನ್ನು ಸುಮ್ಮನೆ ಬಿಡ್ತಾರಾ ? ಸರ್ಕಾರ ಬೆಂಬಲಕ್ಕೆ ನಿಂತಿಲ್ಲ ಹಾಗೇನಾದರೂ ಆಗಿದ್ದರೆ ಮಗ ಅರೆಸ್ಟ್ ಆಗುತ್ತನೆ ಇರುತ್ತಾ ಇರಲಿಲ್ಲ. ವಿಚಾರಣೆ ನೆಡೆಯುತ್ತಿದೆ. ಅಪ್ಪ ಮಗ ಅಥವಾ ಇನ್ಯಾರೆ ಇರಲಿ ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ, ಅವರು ಮಾಡಿರುವ ಆಸ್ತಿ ಸರಿ ಇದೆಯೋ ಇಲ್ಲವೋ, ಏನು ಬೇಕಾದರೂ ಶಿಕ್ಷೆ ಆಗಲಿ ನಾವು ಮುಕ್ತರಾಗಿದ್ದೇವೆ ಎಂದರು.