ಸಿದ್ದರಾಮಯ್ಯ ವಿರುದ್ದ ವಿವಾದಿತ ಹೇಳಿಕೆ – ಸಚಿವ ಅಶ್ವಥ್ ನಾರಾಯಣ ಪೋಟೋ ಗೆ ಬೆಂಕಿ ಹಚ್ಚಿ ಆಕ್ರೋಶ|protest

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿವಾದಿತ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್. ಅಶ್ವಥನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ, ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.




ಬಿ.ಹೆಚ್.ರಸ್ತೆಯ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ದುರಹಂಕಾರಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ಕೊಟ್ಟ ಪ್ರಚೋದನಕಾರಿ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗಾಗಲೀ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗಾಗಲೀ ಆತಂಕ, ಆಶ್ಚರ್ಯವಾಗಿಲ್ಲ. ಏಕೆಂದರೆ ರಾಷ್ಟ್ರಪಿತ ಗಾಂಧೀಜಿಯವರನ್ನು ಕೊಂದವರನ್ನೇ ಆರಾಧಿಸುತ್ತಿರುವ ಬಿಜೆಪಿ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಪ್ರಚೋದನಕಾರಿ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ. ಸರ್ಕಾರ ಸತ್ತು ಹೋಗಿದೆ ಎಂದೇ ಲೆಕ್ಕ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೌನ ಪ್ರತಿಕ್ರಿಯೆ ನೋಡಿದರೆ ಬಿಜೆಪಿಯ ನಿಜ ಸಂಸ್ಕೃತಿ ಏನೆಂಬುದು ಈ ರಾಜ್ಯದ ಜನತೆಗೆ ಅರ್ಥವಾಗುತ್ತಿದೆ. ಕೂಡಲೇ ಅಶ್ವತ್ಥನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು” ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.‌




ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎನ್. ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.



Leave a Reply

Your email address will not be published. Required fields are marked *