ಶಿವಮೊಗ್ಗ ಜಿಲ್ಲೆಯ ಚೋರಡಿಯಲ್ಲಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತವಾಗಿದ್ದು,ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ.
ಖಾಸಗಿ ಬಸ್, ಗೂಡ್ಸ್ ವಾಹನ, ಲಾರಿ ಮತ್ತು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ವಾಹನಗಳಿಗೆ ಹಾನಿ ಉಂಟಾಗಿದೆ. ಆದರೆ ಯಾವುದೆ ವಾಹನದಲ್ಲಿರುವವರಿಗು ಸಮಸ್ಯೆಯಾಗಿಲ್ಲ. ಅದೃಷ್ಟವಶಾತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸಾಗರ ಕಡೆಯಿಂದ ಬಂದ ಖಾಸಗಿ ಬಸ್, ಚೋರಡಿ ಗ್ರಾಮದಲ್ಲಿ ಪ್ರಯಾಣಿಕರು ಇಳಿಯಲು ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ ಹಿಂದೆ ಬಂದ ಕೆಂಪು ಇಟ್ಟಿಗೆ ತುಂಬಿದ್ದ ಲಾರಿ ಚಾಲಕ ಗೂಡ್ಸ್ ಆಟೋವನ್ನು ಓವರ್ ಟೇಕ್ ಮಾಡಲು ಹೋಗಿ ಹಿಂದಿನಿಂದ ಅಪ್ಪಳಿಸಿದೆ. ನಿಯಂತ್ರಣ ಕಳೆದುಕೊಂಡ ಗೂಡ್ಸ್ ಆಟೋ ಬಸ್ ಗೆ ಅಪ್ಪಳಿಸಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿ ಕೂಗಿಕೊಂಡಿದ್ದಾರೆ. ಇದೇ ಸಮಯದಲ್ಲಿ ಸಾಗರ ಕಡೆಗೆ ತೆರಳುತ್ತಿದ್ದ ಕಾರ್ ಗೆ ಲಾರಿ ತಗುಲಿದೆ.
ಘಟನೆಯಿಂದಾಗಿ ಚೋರಡಿಯಲ್ಲಿ ಅರ್ಧ ಗಂಟೆಗು ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.