ಅರಣ್ಯ ಇಲಾಖೆ ಅಧಿಕಾರಿಗಳು ಈಗ ರೈತರ ಸ್ವಾಧೀನದಲ್ಲಿರುವ ಜಾಗದಲ್ಲಿ ಅರಣ್ಯ ಗಡಿ ಗುರುತು ಹಾಕಲು ಬಂದಿದ್ದನ್ನು ನೋಡಿ, ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಭೂಮಿ ಸಂರಕ್ಷಣೆಯ ಭಾಗವಾಗಿ ಗಡಿ ಗುರುತುಗಳನ್ನು ಭದ್ರಪಡಿಸಿಕೊಳ್ಳುವ ಕಾರ್ಯವನ್ನು ಆರಂಭಿಸಿದೆ. ಬೀರನಕೆರೆ ಭಾಗದಲ್ಲಿ ಗೋಮಾಳದ ಜಾಗವಿದ್ದು ಅದನ್ನು ಕೂಡಾ ಅರಣ್ಯ ಇಲಾಖೆ ತನ್ನದೆಂದು ಗುರುತು ಮಾಡಿಕೊಂಡಿದೆ. ಫೆಬ್ರವರಿ ೮ರಂದು ಮಧ್ಯಾಹ್ನದ ಹೊತ್ತಿಗೆ ತಂಡದೊಂದಿಗೆ ಬಂದ ಅಧಿಕಾರಿಗಳು ರೈತರ ಜಮೀನಿನ ಮೇಲೆಯೇ ಬಾಂದ್ ಕಲ್ಲುಗಳನ್ನು ಮರುಸ್ಥಾಪಿಸಿದರು.
ಸರ್ವೆ ನಂ.85ರಲ್ಲಿ ಮಂಜಪ್ಪ ಎಂಬವರಿಗೆ 1.12 ಎಕರೆ ಜಮೀನು ಇತ್ತು. ಈ ಜಾಗದಲ್ಲೂ ಬಾಂದ್ ಕಲ್ಲುಗಳನ್ನು ಅಳವಡಿಸಲಾಗಿದೆ. ಇದರಿಂದ ತನ್ನ ಜಮೀನು ಅರಣ್ಯ ಇಲಾಖೆ ಪಾಲಾಗಲಿದೆ ಎಂಬ ಭಯಕ್ಕೆ ಮಂಜಪ್ಪ ಅವರಿಗೆ ಹೃದಯಾಘಾತವಾಗಿ ಅವರು ಮೃತಪಟ್ಟರು.
ಇದರಿಂದ ಆಕ್ರೋಶಿತರಾದ ಊರಿನ ಜನರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು. ಮಧ್ಯಾಹ್ನದ ಹೊತ್ತು ಯಾರಿಗೂ ತಿಳಿಯದಂತೆ ಬಂದು ಅಳತೆ ಮಾಡಲಾಗಿದೆ. ಈಗ ಭೂಸ್ವಾಧೀನ ಹೊಂದಿರುವ ರೈತರಿಗೆ ಮಾಹಿತಿ ನೀಡಲಾಗಿಲ್ಲ ಎಂದು ಆಕ್ಷೇಸಿ ಘೇರಾವ್ ಹಾಕಿದರು. ಅರಣ್ಯಾಧಿಕಾರಿಗಳು ತಮಗೆ ಭೂಮಿ ಮರುವಶ ಮಾಡಿಕೊಳ್ಳುವ ಉದ್ದೇಶವಿಲ್ಲ. ಅದರೆ, ಎಷ್ಟು ಜಾಗವಿದೆ ಎನ್ನುವುದನ್ನು ಲೆಕ್ಕಾಚಾರ ಮಾಡಬೇಕಾಗಿದೆ. ಅದಕ್ಕಾಗಿ ಸಮೀಕ್ಷೆ ನಡೆಸಿದ್ದೇವೆ ಎಂದು ತಿಳಿಸಿದರು.