ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆತಂಕ ಮೂಡಿಸುವಂತಹ ದರೋಡೆ ಪ್ರಕರಣವೊಂದು ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.
ಆನಂದಪುರ ಸಮೀಪದ ಕೆಂಜಿಗಾಪುರ ಭಟ್ಟರೊಬ್ಬರ ಮನೆಯಲ್ಲಿ ರಾಬರಿ ನಡೆದಿದೆ. ಎಫ್ಐಆರ್ನಲ್ಲಿ ದಾಖಲಾಗಿರುವ ಪ್ರಕಾರ ಎರಡು ಸಲ ರಾಬರಿ ನಡೆದಿದೆ. ಸ್ಥಳೀಯರು ಹೇಳುವ ಪ್ರಕಾರ ಮೂರು ಸಲ ನಡೆದಿರಬಹುದು ಎನ್ನಲಾಗುತ್ತದೆ. ಒಂದೇ ಮನೆಯನ್ನು ಟಾರ್ಗೆಟ್ ಮಾಡಿ ಕೇವಲ ಒಂದು ವಾರದಲ್ಲಿ ಎರಡು ಸಲ ರಾಬರಿ ಮಾಡಲಾಗಿದೆ. ಹಿರಿಯ ವೃದ್ಧರನ್ನ ಕೈ ಕಾಲು ಕಟ್ಟಿ ರಾಬರಿ ಮಾಡಿ ಹೋಗುತ್ತಿರುವವರು ಯಾರು? ಈ ಬಗ್ಗೆ ಪೊಲೀಸರಿಗೆ ಈಗಷ್ಟೆ ಮಾಹಿತಿ ಲಭ್ಯವಾಯಿತೇ ಎಂಬಿತ್ಯಾದಿ ಚರ್ಚೆಗಳು ಸ್ಥಳೀಯರಲ್ಲಿ ನಡೆಯುತ್ತಿದೆ.
ಶ್ರೀಧರ್ ಭಟ್ಟರು ಎಂಬ 75 ವರ್ಷದ ಹಿರಿಯರು ನೀಡಿದ ಕಂಪ್ಲೇಂಟ್ನ ಅಡಿಯಲ್ಲಿ ಐಪಿಸಿ 394 ಸೆಕ್ಷನ್ ಅಡಿಯಲ್ಲಿ FIR ದಾಖಲಾಗಿದೆ. ಈ ಪ್ರಕಾರ, ಮೊದಲ ರಾಬರಿ ಅಟೆಂಪ್ಟ್ 12 -02-2023 ರಂದು ನಡೆದಿದೆ. ಅವತ್ತು ತಡರಾತ್ರಿ 3 ಗಂಟೆ ಸುಮಾರಿಗೆ ನಾಲ್ಕು ಜನ ಮನೆ ಹಂಚಿನಿಂದ ಇಳಿದು ಬಂದು, ವಯಸ್ಸಾದ ಭಟ್ಟರನ್ನು ಹಾಗೂ ಅವರ ಅಕ್ಕನ ಕೈಕಾಲು ಕಟ್ಟಿ ಹಾಕಿ ನಾಲ್ಕೈದು ಲಕ್ಷ ರೂಪಾಯಿ ರಾಬರಿ ಮಾಡಿ ಹೋಗಿದ್ದಾರೆ. ಮೇಲಾಗಿ ಪೊಲೀಸರಿಗೆ ತಿಳಿಸಿದರೇ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಎರಡನೇ ಘಟನೆ
ಶ್ರೀಧರ್ ಭಟ್ಟರು ಭಯದಲ್ಲಿ, ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಈ ನಡುವೆ ದಿನಾಂಕ 20-02-23 ರಂದು ಮತ್ತೊಂದು ಸಲ ರಾಬರಿ ಇವರ ಮನೆಯಲ್ಲಿಯೇ ನಡೆದಿದೆ ಅಂದರೆ ಕೇವಲ ಏಳು ದಿನದ ಅಂತರದಲ್ಲಿ ಎರಡನೇ ಅಟೆಂಪ್ಟ್ ಆಗಿದೆ. ಈ ಸಲ ಮನೆಯ ಕೊಟ್ಟಿಗೆ ಬಳಿ ಮೊದಲೇ ಅವಿತು ನಿಂತಿದ್ದ ನಾಲ್ಕು ಜನ ಶ್ರೀಧರ್ ಭಟ್ ರನ್ನ ಕಟ್ಟಿ ಹಾಕಿ ಅವರ ಅಕ್ಕನ ಮೇಲೆ ಹಲ್ಲೆ ಮಾಡಿ ಒಂದು ಲಕ್ಷ ರೂಪಾಯಿಯನ್ನ ರಾಬರಿ ಮಾಡಿಕೊಂಡು ಹೋಗಿದ್ದಾರೆ.
ಇನ್ನೂ ನೀಡಿದ ದೂರಿನಲ್ಲಿ ಭಟ್ಟರು, ತಮಿಳು ನಾಡು ರಿಜಿಸ್ಟ್ರೇಷನ್ ನಂಬರ್ ಇರುವ ಕಾರಿನ ಬಗ್ಗೆ ಹೇಳಿದ್ದು, ಆ ಕಾರು ಮನೆಯ ಬಳಿ ನಿಂತಿತ್ತು. ಅವರನ್ನ ಕೇಳಿದಾಗ, ಹುಣ್ಣಿಮೆಯ ಪೂಜೆಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಕಂಪ್ಲೆಂಟ್ ಕೊಟ್ಟಿದ್ದಾರೆ. ಶಿವಮೊಗ್ಗ ಪೊಲೀಸ್ ಇಲಾಖೆ ವಿಮಾನ ನಿಲ್ದಾಣ ಉದ್ಘಾಟನೆಯ ಭದ್ರತೆಯಲ್ಲಿ ಬ್ಯುಸಿಯಾಗಿದೆ.ಇದರ ನಡುವೆ ಸಾಗರ ತಾಲ್ಲೂಕಿನಲ್ಲಿ ಈ ರಾಬರಿ ಪ್ರಕರಣ ಹೊರಕ್ಕೆ ಬಂದಿದೆ. ಒಂದೇ ಮನೆಯನ್ನು ವಾರದಲ್ಲಿಎರಡು ಸಲ ಟಾರ್ಗೆಟ್ ಮಾಡಿ ರಾಬರಿ ಮಾಡಿರುವುದು ಆತಂಕ ಮೂಡಿಸ್ತಿದೆ ಅಲ್ಲದೆ ಆರೋಪಿಗಳಿಗೆ ಜಾಗ, ಮನೆ, ವ್ಯಕ್ತಿಯ ಪರಿಚಯ ಇರುವ ಸಾಧ್ಯಸಾಧ್ಯತೆ ಹೇಳುತ್ತಿದೆ. ಟಾಪ್ ಮೋಸ್ಟ್ ಕೇಸ್ಗಳನ್ನು ಸುಲಭವಾಗಿ ಪರಿಹರಿಸಿರುವ ಶಿವಮೊಗ್ಗ ಪೊಲೀಸರು ಈ ಕೇಸನ್ನ ಶ್ರೀಘ್ರದಲ್ಲಿಯೇ ಬಗೆಹರಿಸಬಹುದು.
2021 ರಲ್ಲಿಯು ನಡೆದಿತ್ತು ರಾಬರಿ
ಇನ್ನೊಂದು ಅಚ್ಚರಿಯ ಸಂಗತಿ ಅಂದರೆ, ಇದೇ ಶ್ರೀಧರ್ ಭಟ್ರ ಮನೆಯಲ್ಲಿ 2012 ರಲ್ಲಿ ಹಾಡಹಗಲೇ ರಾಬರಿ ನಡೆದಿತ್ತು. ಅಂದು ಸಹ ಈ ವಿಷಯ ದೊಡ್ಡಮಟ್ಟಿಗೆ ಸದ್ದು ಮಾಡಿತ್ತು. ಕೆಂಜಿಗಾಪುರದ ಗ್ರಾಮದಲ್ಲಿ ಸುತ್ತಮುತ್ತ ಜನವಸತಿ ಇಲ್ಲದ ಒಂಟಿಮನೆಯಲ್ಲಿ ವಾಸಿಸುತ್ತಿರುವ ಶ್ರೀಧರ್ ಭಟ್ ರ ಮನೆಗೆ ನುಗ್ಗಿದ್ದ ನಾಲ್ಕು ಜನರು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಅಂದು ಭಟ್ಟರ ಸಹೋದರಿ ಮೇಲೆ ಹಲ್ಲೆ ಮಾಡಿ, 2 ಲಕ್ಷ ರೂಪಾಯಿ ದೋಚಿ ಹೋಗಿದ್ದರು. ಆಗಲೂ ಸಾಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇಸ್ ಮಾಡಿದ್ದರು. ಇನ್ನೂ ಸ್ಥಳೀಯರ ಪ್ರಕಾರ, ಈ ಕೇಸ್ಗೂ ಮೊದಲೇ ಎರಡು ಸಲ ಭಟ್ಟರ ಮನೆಯಲ್ಲಿ ರಾಬರಿ ಯತ್ನ ನಡೆದಿತ್ತು. ಇದೀಗ ಮತ್ತೆ ವಾರದಲ್ಲಿ ಎರಡು ಸಲ ಕೃತ್ಯ ನಡೆದಿದೆ. ಈ ಸಲ ಆರೋಪಿಗಳಿಗೆ ಪೊಲೀಸರು ಕೋಳ ತೊಡಿಸಲು ಶತಾಯಗತಾಯ ಪ್ರಯತ್ನಿಸ್ತಿದ್ದಾರೆ.