ಶಿವಮೊಗ್ಗ ಜಿಲ್ಲೆಯಲ್ಲಿ ಅಂಗವಿಕಲೆ ಯುವತಿಯ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ, ಬಲತ್ಕಾರದಿಂದ ಅತ್ಯಾಚಾರ ಎಸಗಿದಂತ ಆರೋಪಿಗೆ, ಇಂದು ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ, 40 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗಾರ್ಡರಗದ್ದೆ, ಹುರಳಿ ಗ್ರಾಮದ ಕೃಷ್ಣಯ್ಯ ಶೆಟ್ಟಿ ಎಂಬುವರ ಅಂಗವಿಕಲೆ ಮಗಳ ಮೇಲೆ, ಶಿವರಾಜಪುರ, ಸುರಳಿ ಬಾಳೆ ಬೈಲು ಗ್ರಾಮದ ಸತೀಶ್ ಎಂಬಾತ ಎಂಬಾತ, ತಮ್ಮ ಮನೆಯ ಪಕ್ಕದಲ್ಲಿಯೇ ಇದ್ದಂತ ಅಂಗವಿಕಲೆ ಯುವತಿಯನ್ನು ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ, ಬಲತ್ಕಾರದಿಂದ ಅತ್ಯಾಚಾರವೆಸಗಿದ್ದನು.
ದಿನಾಂಕ 27-12-2019ರಂದು ನಡೆದಿದ್ದ ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಿಪಿಐ ಗಣೇಶಪ್ಪ ಜಿ.ವಿ ಅವರು ಈ ಪ್ರಕರಣ ಸಂಬಂಧ ತನಿಖೆ ನಡೆಸಿ, ಆರೋಪಿ ಸತೀಶ್ ವಿರುದ್ಧ ಐಪಿಸಿ ಕಲಂ 376(ಎಲ್)ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದಂತ ಶಿವಮೊಗ್ಗದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಮಾನು ಅವರು, ಇಂದು ಆರೋಪಿ ಸತೀಶ್ ಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.
ಅಂಗವಿಕಲೆ ಮೇಲಿನ ಅತ್ಯಾಚಾರ ಪ್ರಕರಣದ ಸಂಬಂಧ ಸಂತ್ರಸ್ತೆಯ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಜೆ.ಶಾಂತರಾಜ್ ಹಾಗೂ ಬಿಎಸ್ ಮಮತ ವಾದಿಸಿದ್ದರು.