ಶಿವಮೊಗ್ಗ : ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಕಾಮಗಾರಿ ಅಂತಿಮ ಹಂತದಲ್ಲಿದೆ. ಕೆಲವೇ ದಿನದಲ್ಲಿ ಕೇಂದ್ರದಿಂದ ಡಿಜಿಸಿಎ ತಂಡ ಪರಿಶೀಲನೆಗೆ ಆಗಮಿಸಲಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿರುವ ಸೂಕ್ಷ್ಮ ಉಪಕರಣಗಳ ಸುರಕ್ಷತೆ ಹಿನ್ನೆಲೆ ಮತ್ತು ಕಾಮಗಾರಿಗೆ ತೊಡಕಾಗದಂತೆ ತಡೆಯಲು ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ವೀಕ್ಷಣೆಗೆ ನೂರಾರು ಜನ ನಿತ್ಯ ಬರುತ್ತಿದ್ದಾರೆ. ರನ್ ವೇ ಮೇಲೆ ವಾಹನ ಚಲಾಯಿಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆ ವಿಮಾನ ನಿಲ್ದಾಣ ಉದ್ಘಾಟನೆ ಆಗುವವರೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಅವರು ಈ ಆದೇಶ ಹೊರಡಿಸಿದ್ದಾರೆ.