ಪ್ರತ್ಯೇಕ ಪ್ರಕರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕು ಕೊನಗನವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ನಿವಾಸಿ ಲೋಕೇಶ್(32) ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದಲ್ಲೂ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ರಂಗನಾಥ್ (23) ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಲೋಕೇಶ್ ಭಾನುವಾರ ರಜೆ ಇದ್ದ ಕಾರಣ ಕೊನಗನವಳ್ಳಿ ಗ್ರಾಮದಲ್ಲಿ ಆಯೋಜನೆಯಾಗಿದ್ದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ. ಈ ವೇಳೆ ಲೋಕೇಶ್ಗೆ ಹೋರಿ ಎದುರುಗಡೆಯಿಂದ ಬಂದು ಎದೆಗೆ ಗುದ್ದಿದೆ. ಇದರಿಂದ ಲೋಕೇಶ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಯನೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಲೋಕೇಶ್ ಸಾವನ್ನಪ್ಪಿದ್ದಾರೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು:
ಲೋಕೇಶ್ಗೆ ಪತ್ನಿ ಹಾಗೂ 5 ವರ್ಷ ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳು ಹಾಗೂ ಒಂದೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಕುಟುಂಬಕ್ಕೆ ಲೋಕೇಶ್ ಅವರೇ ಆಧಾರವಾಗಿದ್ದರು. ಹೋರಿ ಬೆದರಿಸುವ ಸ್ಪರ್ಧೆ ಅಯೋಜಕರ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಲೋಕೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಲೋಕೇಶ್ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದೆ. ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲಾಡಳಿತ ಇಂತಹ ಅಪಾಯಕಾರಿ ಸ್ಪರ್ಧೆಗಳಿಗೆ ಬ್ರೇಕ್ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಮೃತ ಲೋಕೇಶ್ ಪತ್ನಿ ಚಂದ್ರಮ್ಮ ಹೋರಿ ಬೆದರಿಸುವ ಸ್ಪರ್ಧೆ ಆಯೋಜಕರ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದಲ್ಲೂ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ರಂಗನಾಥ್ (23) ಎಂಬ ಯುವಕ ಸಾವನ್ನಪ್ಪಿದ್ದಾನೆ. ಈತ ಮಾಳೂರು ಗ್ರಾಮದ ನಿವಾಸಿಯಾಗಿದ್ದಾನೆ. ಈತ ಗ್ರಾಮದಲ್ಲಿ ಸಣ್ಣದೊಂದು ಕ್ಯಾಂಟೀನ್ ನಡೆಸುತ್ತಿದ್ದ. ಜನವರಿ 14ರಂದು ನಡೆದ ಸ್ಪರ್ಧೆ ನೋಡಲು ಹೋದಾಗ ಓಡುತ್ತಿದ್ದ ಹೋರಿಯು ರಂಗನಾಥ್ನ ಹೊಟ್ಟೆ ಸೀಳಿಕೊಂಡು ಹೋಗಿದೆ.
ಕೊನಗನವಳ್ಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 8 ಜನರು ಗಾಯಗೊಂಡಿದ್ದಾರೆ. ಕೆಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಆಗಿದ್ದಾರೆ. ಇನ್ನಿಬ್ಬರಿಗೆ ಕಣ್ಣು ಹಾಗೂ ಬೆನ್ನಿಗೆ ಗಾಯವಾಗಿದೆ. ಇವರೆಲ್ಲರೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಾಯಕಾರಿ ಸ್ಪರ್ಧೆ ಆಯೋಜನೆ ಮಾಡಲು ಅನುಮತಿ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕು ಹಾಗೂ ಆಯೋಜಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆಸ್ಪತ್ರೆ ಶವಾಗಾರದ ಬಳಿ ಲೋಕೇಶ್ ಸಂಬಂಧಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಶವಗಾರದ ಬಳಿ ಬಂದ ಗ್ರಾಮಾಂತರ ಶಾಸಕ ಕೆ. ಬಿ ಅಶೋಕ ನಾಯಕ್ ಎದುರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಶಾಸಕ ಕೆ. ಬಿ ಅಶೋಕ ನಾಯ್ಕ, ಇಂತಹ ದುರ್ಘಟನೆ ನಡೆಯಬಾರದಿತ್ತು, ನಡೆದಿದೆ. ಮೃತರ ಮನೆಯವರ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಅವರ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.