ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಬೂತ್ ಮಟ್ಟದಿಂದ ಸದೃಡವಾಗಿದೆ,ಯುವಕರು ನಮ್ಮ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುವ ಮೂಲಕ ನವ ಭಾರತ ನಿರ್ಮಾಣ ಸಂಕಲ್ಪಕ್ಕೆ ಮುನ್ನುಡಿ ಹಾಕುತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹೈಕೋರ್ಟ್ ವಕೀಲ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ ದಿವಾಕರ್ ಹೇಳಿದರು.
ಪಟ್ಟಣದ ಆಶ್ರೀತಾ ಸಭಾಂಗಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ದ ಹರಿಹಾಯ್ದರು.ನಮ್ಮ ಪಕ್ಷ ರಾಜ್ಯದಲ್ಲಿ ಈ ಬಾರಿ ನಮ್ಮ ಸ್ಪರ್ಧೆ ಎಲ್ಲಾ ಪಕ್ಷಗಳ ನಿದ್ದೆಗೆಡಿಸಿವೆ.
ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯ ಕೃತಿ ಚೌರ್ಯ :
ರಾಜ್ಯದಲ್ಲಿ ಆಡಳಿತರೂಡ ಬಿಜೆಪಿ ಪಕ್ಷ ಕೇವಲ ಭ್ರಷ್ಟಾಚಾರ ನಡೆಸುವುದರಲ್ಲೇ ನಿರತವಾಗಿದೆಯೇ ಹೊರತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಿಂಚಿತ್ತೂ ಚಿಂತಿಸುತಿಲ್ಲ,ಇನ್ನೂ ಕಾಂಗ್ರೆಸ್ ಪಕ್ಷ ತನ್ನ ಇತಿಹಾಸದಲ್ಲಿಯೇ ಚುನಾವಣಾ ಪೂರ್ವ ಯಾವುದೇ ಯೋಜನೆ ಘೋಷಿಸುತ್ತಿರಲಿಲ್ಲ ಆದರೆ ಈ ಬಾರಿ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯ ಕೆಲ ಯೋಜನೆಗಳನ್ನು ಕೃತಿಚೌರ್ಯ ನಡೆಸಿ ತನ್ನದೇ ಯೋಜನೆ ಎಂಬಂತೆ ಬಿಂಬಿಸಿಕೊಳ್ಳುವಂತಹ ಹತಾಶ ಪರಿಸ್ಥಿತಿಗೆ ಬಂದಿದೆ ಎಂದರು.
ಪಿಂಪ್ ಗಳ ಬಳಿ ವ್ಯವಹಾರ ಮಾಡುವಂತಹ ಕೆಟ್ಟ ಮನಸ್ಥಿತಿ ಆರಗ ಜ್ಞಾನೇಂದ್ರ ಅವರದ್ದಲ್ಲ :
ಪಿಎಸ್ ಐ ಹಗರಣ ಮತ್ತು ಸ್ಯಾಂಟ್ರೋ ರವಿ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಆರಗ ಜ್ಞಾನೇಂದ್ರ ಒಳ್ಳೆಯ ವ್ಯಕ್ತಿ ಆದರೆ ಒಬ್ಬ ಒಳ್ಳೆಯ ವ್ಯಕ್ತಿ ಎಂದಿಗೂ ಒಳ್ಳೆಯ ಗೃಹ ಸಚಿವನಾಗುವುದಿಲ್ಲ ಎಂಬುವುದನ್ನು ಜ್ಞಾನೇಂದ್ರ ಸಾಬೀತುಪಡಿಸಿದ್ದಾರೆ.ಪಿಂಪ್ ಗಳ ಬಳಿಯಲ್ಲಿ ವ್ಯವಹಾರ ಮಾಡುವಂತಹ ಕೆಟ್ಟ ಮನಸ್ಥಿತಿ ಆರಗ ಜ್ಞಾನೇಂದ್ರ ಅವರದ್ದಲ್ಲ ಆದರೆ ಅವರ ಬೆನ್ನ ಹಿಂದಿರುವ ವ್ಯವಸ್ಥೆ ಪಿಂಪ್ ಗಳ ರಕ್ಷಣೆ ಮಾಡುವಂತೆ ಪ್ರೇರೆಪಿಸುತ್ತದೆ ಆದ್ದರಿಂದ ನಮ್ಮ ಜಿಲ್ಲೆಯ ಗೌರವಕ್ಕೆ ಚ್ಯುತಿ ತರದೇ ಗೃಹ ಸಚಿವ ಸ್ಥಾನ ತೊರೆದು ತೋಟಗಾರಿಕೆ ,ಈರುಳ್ಳಿ ಅಥವಾ ಬೆಳ್ಳುಳ್ಳಿ ಸಚಿವರಾಗಲಿ ಎಂದು ಹೇಳಿದರು.
ಐಪಿಸಿ ಸೆಕ್ಷನ್ ಬಗ್ಗೆ ಅರಿವಿಲ್ಲದ ಗೃಹ ಸಚಿವ :
ಒಬ್ಬ ಗೃಹ ಸಚಿವನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಇವರಿಗೆ ಐಪಿಸಿ ಸೆಕ್ಷನ್ ಬಗ್ಗೆ ಅರಿವಿಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ, ಪ್ರಚೋದನೆ ಕೊಡುವುದು ಕೂಡಾ ಅಪರಾಧ ಅಂತಹದರಲ್ಲಿ ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವುದು ಒಬ್ಬ ಅಸಹಾಯಕ ಗೃಹಮಂತ್ರಿಯ ಆಕ್ರಂದನ,ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದರು.
ಎಂಎಸ್ ಐಎಲ್ ಮಳಿಗೆಗಳನ್ನು ಬಿಜೆಪಿ ಕಚೇರಿಗಳನ್ನಾಗಿ ಮಾಡಿಕೊಂಡಿದ್ದಾರೆ ಶಾಸಕ ಹರತಾಳು ಹಾಲಪ್ಪ :
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ರವರು ಎಂಎಸ್ ಐಎಲ್ ಮಳಿಗೆ ತೆರೆಯುವುದೇ ಅಭಿವೃದ್ಧಿ ಎಂದುಕೊಂಡಿದ್ದಾರೆ.ಅದರಲ್ಲೂ ಎಂಎಸ್ ಐಎಲ್ ಮಳಿಗೆ ಕೇವಲ ಬಿಜೆಪಿ ಬಾವುಟ ಹಿಡಿದವರಿಗೆ ಮಾತ್ರ ಕೊಡುವುದರ ಮೂಲಕ ಎಂಎಸ್ ಐಎಲ್ ಅಂಗಡಿಯನ್ನು ಬಿಜೆಪಿ ಕಛೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ,ಗಣಪತಿ ಕೆರೆ ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಇವರು ಆ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಹೊಣೆ ಹೊರಬೇಕಾಗುತ್ತದೆ.ಈ ಬಗ್ಗೆ ಆದ್ಮಿ ಪಕ್ಷ ಲೋಕಾಯುಕ್ತಕ್ಕೆ ಎಲ್ಲಾ ಬಗೆಯ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದರು.
ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕೆಲವು ಅಧಿಕಾರಿಗಳು ಆಡಳಿತ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ :
ಇನ್ನೂ ಸಾಗರ ವಿಧಾನಸಭಾ ಕ್ಷೇತ್ರದ ಕೆಲ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದೇ ಆಡಳಿತ ಪಕ್ಷದ ಏಜೆಂಟ್ ರೀತಿ ವರ್ತಿಸುತಿದ್ದಾರೆ ಅಂತಹವರ ಮೇಲೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಮತ್ತು ಅಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಆಮ್ ಆದ್ಮಿ ಪಕ್ಷ ಕಣ್ಣಿಟ್ಟಿರುತ್ತದೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಕ್ಶದ ಹೊಸನಗರ ತಾಲೂಕ್ ಉಪಾಧ್ಯಕ್ಷ ಹಸನಬ್ಬಾ , ಮುಖಂಡರಾದ ಸಂತೋಷ್ ಆಶ್ರಿತಾ,ಚೇತನ್ ಹಾಗೂ ಇನ್ನಿತರರಿದ್ದರು.