ರಿಪ್ಪನ್‌ಪೇಟೆ: ಶಾಲೆ ಎಂಬುದು ಅರಿವಿನ ದೇಗುಲ, ಮನುಷ್ಯನಿಗೆ ನಾಗರೀಕತೆ ಬರುವುದು ಶಾಲೆಯಿಂದ. ಸಮಾಜಮುಖಿ ಜ್ಞಾನಾರ್ಜನೆ ಪಡೆದವರು ಕಾಶಿ ಯಾತ್ರೆ ಮಾಡುವ, ರಾಮ ಮಂದಿರ ನಿರ್ಮಿಸುವ ಬದಲು ನಮ್ಮೂರೇ ನಮಗೆ ಕಾಶಿಯಾಗಬೇಕು, ನಮ್ಮ ಮನೆಯನ್ನೇ ರಾಮ ಮಂದಿರ ಅಯೋಧ್ಯೆಯನ್ನಾಗಿ ಪರಿವರ್ತಿಸಬೇಕು ಎಂದು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ತಿಳಿಸಿದರು.
ಸಮೀಪದ ಹೆದ್ದಾರಿಪುರದ ಸಾವಿತ್ರಮ್ಮ ಶ್ರೀರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಶಾಲೆಗಳ ಮುಖ್ಯ ಉದ್ದೇಶವೇ ಮಕ್ಕಳನ್ನು ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವುದು ಸಾವಿತ್ರಮ್ಮ ಶ್ರೀರಾಮಕೃಷ್ಣ ಶಾಲೆಯಿಂದ ಧರ್ಮ ಮತ್ತು ಜ್ಞಾನ ಮಕ್ಕಳಿಗೆ ಸಿಗುವಂತಾಗಲಿ. ನನ್ನ ಕಷ್ಟ ಇನ್ನೊಬ್ಬರಿಗೆ ಬರಬಾರದು ಎಂಬುದು ಭಾರತೀಯ ಗುಣ ನಗರದಲ್ಲಿ ಕೂತು ಸಾಧನೆ ಮಾಡುವುದೇನು ದೊಡ್ಡದಲ್ಲ. ಆದರೆ ತಾನಿದ್ದ ಹಳ್ಳಿಯಲ್ಲಿ ಸಾಧನೆಮಾಡಿ ನಗರ ಪ್ರದೇಶದವರು ಇತ್ತ ನೋಡುವಂತೆ ಗಮನಸೆಳೆಯುವುದೇ ದೊಡ್ಡ ಸಾಧನೆ. ಅದನ್ನು ಶಾಲೆಯ ಮುಖ್ಯಸ್ಥ ಶಿವರಾಮ ಮಾಡಿದ್ದಾರೆ. ಕಾಣದ ದೇವರ ಕೈಮುಗಿಯವ ಬದಲು ನಿನ್ನನ್ನು ಲೋಕಕ್ಕೆ ಕಾಣಿಸುವಂತೆ ಮಾಡಿದ ತಾಯಿಗೆ ಕೈಮುಗಿದರೆ ನಿನ್ನ ಬದುಕು ಸಾರ್ಥಕವಾಗುತ್ತದೆ. ದೇಶ, ತಾಯಿ, ಗುರು ಋಣ ಜೀವನದಲ್ಲಿ ತೀರಿಸಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನದಲ್ಲಿ ಸದಾಕಾಲ ನೀವು ಮನಸಾಕ್ಷಿಗನುಗುಣವಾಗಿ ಬದುಕಿದರೆ ನಿಮ್ಮ ಬದುಕು ಬದಲಾಗುತ್ತದೆ. ಗೊಂದಲದ ಮನಸ್ಥಿತಿಯನ್ನು ತೊಡೆದು ಹಾಕಿ ಸಮಾಜದ ಎಲ್ಲರೂ ಸಮಾನರು ಎಂಬ ಧ್ಯೇಯದೊಂದಿಗೆ ಬದುಕು ಸಾಗಿಸಬೇಕೆಂದು ಶುಭಹಾರೈಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ ಮನಷ್ಯನ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾದ ಘಟ್ಟ. ಯಾವ ದೇಶ ಶಿಕ್ಷಣಕ್ಕೆ ಮಹತ್ವವನ್ನು ನೀಡುವುದಿಲ್ಲವೋ ಅಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಗುಣಮಟ್ಟ, ಜೀವನಮೌಲ್ಯ, ಸಮಾಜಮುಖಿ ಶಿಕ್ಷಣ ಅಗತ್ಯವಿದ್ದು ಪೋಷಕರು ಮಕ್ಕಳಿಗೆ ಇದರತ್ತ ಚಿತ್ತ ಹರಿಸಲು ಹೆಚ್ಚು ಆಸಕ್ತಿವಹಿಸಬೇಕು. ಶಿಕ್ಷಕರು ಪಠ್ಯಕ್ರಮಕ್ಕೆ ಜ್ಞಾನವನ್ನು ಸೀಮಿತಗೊಳಿಸಿಕೊಳ್ಳದೆ ಪಠ್ಯದಲ್ಲಿನ ಮೂಲ ಉದ್ದೇಶದ ಅಧ್ಯಯನ ಅಗತ್ಯವಾಗಿದೆ. ಮಕ್ಕಳಿಗೆ ಚೆನ್ನಾಗಿ ಕಲಿಸಬೇಕೆಂಬ ಅಂತಸತ್ವವಿರಬೇಕು. ಶಿಕ್ಷಣದ ತಿರುಳು ಅರಿಯದವರು ಮಕ್ಕಳಿಗೆ ಪಾಠಮಾಡುವ ವ್ಯವಸ್ಥೆ ಆಗಬಾರದು. ತಮ್ಮ ವೃತ್ತಿಯಲ್ಲಿ ಸಮಯ ಪಾಲನೆಯೊಂದಿಗೆ, ವಿಚಾರಗಳ ಅಧ್ಯಯನ ಆಗಬೇಕು. ಜ್ಞಾನವೆಂಬುದು ಆಕಾಶದಿಂದ ಬಂದು ತಲೆಗೆ ಬೀಳುವುದಿಲ್ಲ. ನಾವೇ ಕಲಿತುಕೊಂಡು ಜೀವನದಲ್ಲಿ ಶಿಸ್ತು,ಸಂಯಮ ವನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಶಿವರಾಮ್, ಬಿ.ಪಿ. ರಾಮಚಂದ್ರ, ವಾಸಪ್ಪಗೌಡ, ನಾಗರಾಜ ಹೆಚ್.ಕೆ., ವಿಜಯಕುಮಾರ್ ಶೆಟ್ಟಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೇವರಾಜ, ಪೋಷಕರ ಸಂಘದ ಅಧ್ಯಕ್ಷ ಚೆಂದಪ್ಪಗೌಡ ಇದ್ದರು.