ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಅಪರಿಚಿತ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಶಿವಮೊಗ್ಗದ ನಿವಾಸಿಗಳು ಕಾರ್ಕಳಕ್ಕೆ ಹೋಗುತ್ತಿದ್ದರು. ಮಕ್ಕಳ ಪರೀಕ್ಷೆ ಬರೆಸುವ ಕಾರಣಕ್ಕೆ ಶಿವಮೊಗ್ಗದ ಕುಟುಂಬ ಹೋಗುತ್ತಿತ್ತು. ಈ ವೇಳೆ ಅಚಾನಕ್ಕಾಗಿ ರಸ್ತೆ ಪಕ್ಕದ ಚರಂಡಿಗೆ ಅವರ ಕಾರು ಇಳಿದು, ಅದನ್ನು ಮೇಲೆ ತರಲಾಗದೇ ಒದ್ದಾಡುತ್ತಿದ್ದರು.
ಈ ಸಂದರ್ಭದಲ್ಲಿ, ಇದೇ ಮಾರ್ಗವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ದಾರಿಯಲ್ಲಿ ಕಾರು ಅಪಘಾತವಾಗಿದ್ದ ದೃಶ್ಯ ಕಂಡ ತಕ್ಷಣ ತಮ್ಮ ಕಾರು ನಿಲ್ಲಿಸಲು ಡ್ರೈವರ್ ಗೆ ಸೂಚಿಸಿದರು. ಜತೆಗೆ ತಮ್ಮೊಡನಿದ್ದವರನ್ನೂ ಕಾರಿನಿಂದ ಇಳಿಸಿದರು.
ಅಪಘಾತಕ್ಕೀಡಾದ ಕಾರನ್ನು ತಮ್ಮ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೇಲಕ್ಕೆತ್ತಿಸಿ, ಆ ಕುಟುಂಬ ಕಾರ್ಕಳಕ್ಕೆ ತೆರಳಲು ಸಹಾಯ ಮಾಡಿದರು. ಅಪಘಾತಕ್ಕೀಡಾದ ಕುಟುಂಬದವರಿಗೆ ಅದೃಷ್ಟವಶಾತ್ ಯಾವುದೇ ಹಾನಿಯಾಗಿರಲಿಲ್ಲ. ನಂತರ ಗೃಹ ಸಚಿವರು ಅವರೆಲ್ಲರಿಗೂ ಧೈರ್ಯ ತುಂಬಿ ಕಳುಹಿಸಿದರು.
ಸುಮಾರು ಒಂದು ವರ್ಷದ ಹಿಂದೆ ನಡೆದ ಅಪಘಾತ
ಪ್ರಕರಣವೊಂದರಲ್ಲೂ ಗೃಹ ಸಚಿವರು ಮಾನವೀಯತೆ ತೋರಿದ್ದರು. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವ ಮಾರ್ಗ ಮಧ್ಯದ ಮಂಡಗದ್ದೆ ಬಳಿ ಬೈಕ್ ಅಪಘಾತವಾಗಿತ್ತು. ಬೈಕ್‌ನಲ್ಲಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಗಮನಿಸಿದ ಗೃಹ ಸಚಿವರು ತಮ್ಮ ಕಾರನ್ನು ನಿಲ್ಲಿಸಿ, ಸ್ವತಃ ತಾವೇ ಗಾಯಾಳುಗಳಿಗೆ ನೀರು ಕುಡಿಸಿ ಉಪಚರಿಸಿದ್ದರು. ನಂತರ ಆ್ಯಂಬುಲೆನ್ಸ್ ಬರುವುದು ತಡವಾಗುತ್ತದೆಂದು, ತಮ್ಮ ಎಸ್ಕಾರ್ಟ್ ವಾಹನದಲ್ಲೇ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಸಮಯ ಪ್ರಜ್ಞೆ ಮೆರೆದಿದ್ದರು.