ಹೊಸನಗರ : ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಿಂದ ಓರ್ವ ವಿದ್ಯಾರ್ಥಿಗೆ ಸುಟ್ಟಗಾಯಗಳಾಗಿರುವ ಘಟನೆ ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಶನಿವಾರ ರಾತ್ರಿ ಜರುಗಿದೆ.
ಮೂರು ದಿನಗಳ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೊನೆ ದಿನವಾದ ಶನಿವಾರ ರಾತ್ರಿ ವಿದ್ಯಾರ್ಥಿಗಳಿಂದ ಪಿರಮಿಡ್ ನಿರ್ಮಾಣ ಹಾಗೂ ಬೆಂಕಿಯ ರಿಂಗ್ ಒಳಗಿನ ಜಿಗಿತದ ವೇಳೆ ಘಟನೆ ಸಂಭವಿಸಿದೆ.
ಮೂಲತಃ ಬೆಂಗಳೂರಿನ ಬನಶಂಕರಿ ಬಡಾವಣೆಯ ವಾಸಿಯಾದ ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸಿಂಹಾದ್ರಿಗೆ ಘಟನೆಯಿಂದ ಮುಖ, ಕಣ್ಣು, ಕಿವಿಗಳಿಗೆ ಸುಟ್ಟಗಾಯಗಳಾಗಿದೆ. ತತಕ್ಷಣ ಶಾಲಾ ಸಿಬ್ಬಂದಿಗಳು ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.
ಶನಿವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಸಂಧರ್ಭದಲ್ಲಿ ಬೆಂಕಿಯ ರಿಂಗ್ ಒಳಗೆ ಜಿಗಿತ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಸಿಂಹಾದ್ರಿ ಬೆಂಕಿಯ ರಿಂಗ್ ಒಳಗೆ ಜಿಗಿಯುವ ವೇಳೆ ಈ ದುರ್ಘಟನೆ ಸಂಭವಿಸಿದೆ.
 
                         
                         
                         
                         
                         
                         
                         
                         
                         
                        