ರಿಪ್ಪನ್‌ಪೇಟೆ : ವಿದ್ಯಾರ್ಥಿಗಳಿಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವುದರೊಂದಿಗೆ ಗುರು ಹಿರಿಯರನ್ನು ಪ್ರೀತಿ ವಿಶ್ವಾಸ ಗೌರವಾದರದಿಂದ ಕಾಣುವ ಗುಣವನ್ನು ಕಲಿಸಬೇಕು. ವಿದ್ಯ ಕದಿಯಲಾರದ ವಸ್ತುವಾಗಿದ್ದು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ದಾನ ಮಾಡಬೇಕು ರೂಪ ಮತ್ತು ಹಣ ಶಾಶ್ವತವಲ್ಲ ಧರ್ಮವೊಂದೆ ಶಾಶ್ವತ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಪಟ್ಟಣದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷೀಕೋತ್ಸವ ಮತ್ತು ಶ್ರೀಮಾತೆ ಶಾರದಾದೇವಿಯ ಜಯಂತಿ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಶೀರ್ವಚನ ನೀಡಿ ಹೂವು ತನ್ನ ಸುವಾಸನೆಯನ್ನು ಹೊರ ಸೂಸುವಂತೆ ವಿದ್ಯಾರ್ಥಿಗಳಲ್ಲಿ ತ್ಯಾಗ ಗುಣ ವಿದ್ಯೆ ವಿನಯ ಕೀರ್ತಿಯು ದಶದಿಕ್ಕಿನಲ್ಲಿ ಪಸರಿಸುವಂತಾಗಲು ಸತತ ಪರಿಶ್ರಮದಿಂದ ಅಭ್ಯಾಸ ಮಾಡಬೇಕು ಎಂದು ಮಕ್ಕಳಿಗೆ ತಿಳಿಹೇಳಿದ ಶ್ರೀಗಳು ವಿದ್ಯಾರ್ಥಿಗಳಲ್ಲಿ ಪಠೇತರ ಚಟುವಟಿಕೆಯ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಪ್ರೇರಣೆಯಾಗುವುದೆಂದು ಹೇಳಿದರು.
ಕಸ್ತೂರಿ ಕನ್ನಡಸಂಘದ ಅಧ್ಯಕ್ಷ ಮೆಣಸೆ ಆನಂದ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯ ಬಗ್ಗೆ ಪ್ರೇರಣೆಯನ್ನು ನೀಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂದು ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ರಾಷ್ಟ್ರಮಟ್ಟದಲ್ಲೂ ಮಿಂಚಬಹುದು ಎನ್ನುವುದಕ್ಕೆ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ ಉದಾಹರಣೆ ಯಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಇಂದು ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಎಸ್.ಎಸ್.ಎಲ್.ಸಿ. ವಾರ್ಷೀಕ ಪಬ್ಲಿಕ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿ ಗೌರವಿಸಲಾಯಿತು.
ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸರಿತಾ ದೇವರಾಜ್ ನೆರವೇರಿಸಿದರು.