ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ.ಶ್ರೀಕಾಂತ್ ಕಾರ್ಯಕರ್ತರಿಗೆ ಕರೆ ನೀಡಿದರು.
ಶಿವಮೊಗ್ಗದ ನೆಹರು ರಸ್ತೆಯ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಿಂದ ಬೂತ್ ಮಟ್ಟದ ಕಮಿಟಿ ನಿರ್ಮಾಣ ಮಾಡುವುದು ಮತ್ತು ಪ್ರತಿ ಕ್ಷೇತ್ರದಿಂದ 50 ಅಲ್ಪಸಂಖ್ಯಾತ ಪ್ರಮುಖರ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಬೇಕು.
ಈ ನಿಟ್ಟಿನಲ್ಲಿ ಜೆಡಿಎಸ್ ಪ್ರಮುಖರು ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಸ್ತುತ ಜೆಡಿಎಸ್ ಬಗ್ಗೆ ಜನರ ಒಲವಿದೆ. ಅದನ್ನು ಮತ್ತಷ್ಟು ಭದ್ರಗೊಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ. ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಿದ್ದೇ ಆದಲ್ಲಿ ಚುನಾವಣೆಯನ್ನು ಸುಲಭವಾಗಿ ಎದುರಿಸಬಹುದು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ 22 ವಾರ್ಡ್‌ಗಳಲ್ಲಿ ಮಾತ್ರ ಬೂತ್‌ಕಮಿಟಿ ರಚನೆಯಾಗಿದ್ದು ಶೀಘ್ರವೇ ಉಳಿದ ವಾರ್ಡ್‌ಗಳ ಕಮಿಟಿ ರಚನೆ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಶಾರದಾ ಪೂರ‌್ಯಾನಾಯ್ಕ, ಭದ್ರಾವತಿಯ ಜೆಡಿಎಸ್ ಮುಖಂಡೆ ಶಾರದಾ ಅಪ್ಪಾಜಿಗೌಡ, ತೀರ್ಥಹಳ್ಳಿಯ ಮುಖಂಡ ಯಡುರು ರಾಜಾರಾಮ್ ಮಾತನಾಡಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಸತೀಶ್,ಜೆಡಿಎಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಪ್ರಮುಖರಾದ ರಾಮಕೃಷ್ಣ, ನಾಗರಾಜ್ ಕಂಕಾರಿ, ಪಾಲಾಕ್ಷಿ , ಬಾಸೂರು ಚಂದ್ರೇಗೌಡ, ಎಸ್.ಕೆ.ಭಾಸ್ಕರ್, ಮಹಮ್ಮದ್ ಯುಸೂಫ್, ಹನುಮಂತಪ್ಪ, ಮತ್ತಿತರರಿದ್ದರು.