ರಿಪ್ಪನ್ ಪೇಟೆ : ಜಗತ್ತಿಗೆ ಶಾಂತಿ, ಸಹಬಾಳ್ವೆ, ಪ್ರೀತಿಯ ಜೀವನ ಸಂದೇಶ ಸಾರಿದ ಶಾಂತಿದೂತ ಏಸುಕ್ರಿಸ್ತರ ಜನ್ಮದಿನದ ಈ ಅಪೂರ್ವ ಹಬ್ಬವೇ ಕ್ರಿಸ್ಮಸ್ ಎಂದು ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚಿನ ಧರ್ಮಗುರು ರೆ. ಫಾ. ಬಿನೋಯ್ ಹೇಳಿದರು.
ರಿಪ್ಪನ್ ಪೇಟೆ ಪಟ್ಟಣದ ಗುಡ್ ಶೆಫರ್ಡ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಪೂಜೆಯಲ್ಲಿ ಭಾಗವಹಿಸಿ ಶುಭ ಸಂದೇಶವನ್ನು ನೀಡಿದ ಅವರು ಏಕತೆ ಮತ್ತು ಸಾಮರಸ್ಯವನ್ನು ಸಾರುವ ಹಬ್ಬವಿದು. ಸಮೃದ್ಧ ಮತ್ತು ಶಾಂತಿಯುತ ಹೊಸ ವರ್ಷಕ್ಕಾಗಿ ಇಲ್ಲಿ ಎಲ್ಲರೂ ಒಟ್ಟಾಗಿ ಕರುಣಾಮಯ ದೇವರನ್ನು ಪಾರ್ಥಿಸುತ್ತಾರೆ.
ಎಲ್ಲರನ್ನೂ ಪ್ರೀತಿಸು, ಶತ್ರುಗಳನ್ನು ಕ್ಷಮಿಸು, ಸರ್ವರಿಗೂ ಒಳಿತನ್ನೇ ಬಯಸು… ಎಂಬಂತಹ ಜೀವನ ಸಂದೇಶವನ್ನು ಸರ್ವಶಕ್ತ ಏಸುಕ್ರಿಸ್ತರು ಜಗತ್ತಿಗೆ ಸಾರಿದ್ದಾರೆ. ಈ ಸಂದೇಶಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪ.
“ಕಷ್ಟ, ನೋವುಗಳ ಬೆಟ್ಟ ಕರಗಲಿ.ನಮ್ಮ ರಾಜ್ಯ ರಾಷ್ಟ್ರ ಹಾಗೂ ವಿಶ್ವದಲ್ಲಿ ಸದಾ ಆನಂದ ತುಂಬಿರಲಿ. ಸುಖ, ಶಾಂತಿಯ ಜೀವನ, ಉತ್ತಮ ಆರೋಗ್ಯ ಎಲ್ಲರಿಗೂ ಲಭಿಸುವಂತಾಗಲಿ ಎಂದರು.
ಈ ಧಾರ್ಮಿಕ ಆಚರಣೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಧರ್ಮ ಗುರುಗಳು ಭಾಗವಹಿಸಿದ್ದರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಾಗೆಯೇ ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಚರ್ಚಿನ ಆವರಣದಲ್ಲಿ ನಿರ್ಮಿಸಲಾಗಿತ್ತು.
ಡಿಸೆಂಬರ್ ತಿಂಗಳ ಭಯಂಕರ ಚಳಿಯ ನಡುವೆ ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಂದ ಆಗಮಿಸಿದ ಮಕ್ಕಳು,ಮಹಿಳೆಯರು, ವಯೋವೃದ್ಧರು ಸೇರಿದಂತೆ ಕ್ರೈಸ್ತ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯಗಳು ಕೋರಿದರು.
ಆಗಮಿಸಿದ ಭಕ್ತರೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೇಕ್ ವಿತರಿಸಲಾಯಿತು.