ರಿಪ್ಪನ್ ಪೇಟೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದಕ್ಷಿಣ ವಿಭಾಗದ ಅಂತರ್ ರಾಜ್ಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡದಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ನಮಿತಾ ಹೆಗಡೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 27 ರಿಂದ 31 ರವರೆಗೆ ಕೇರಳದ ಕೊಟ್ಟಾಯಂ ನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಅರಸಾಳು ಗ್ರಾಮದ ನಿವಾಸಿಗಳಾದ ಸತೀಶ್ ಹೆಗ್ಡೆ ಮತ್ತು ಐಶ್ವರ್ಯ ದಂಪತಿಗಳ ಪುತ್ರಿಯಾದ ನಮಿತಾ ಹೆಗ್ಡೆ ಪ್ರಸ್ತುತ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ ಇ ವ್ಯಾಸಂಗ ಮಾಡುತಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸುವ ತಂಡದಲ್ಲಿ ಸ್ಥಾನ ಪಡೆದು ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ ಮಲೆನಾಡಿನ ಯುವ ಪ್ರತಿಭೆ ನಮಿತಾ ಹೆಗ್ಡೆ ರಿಪ್ಪನ್‌ಪೇಟೆಯ ಶ್ರೀ ಬಸವೇಶ್ವರ ಶಾಲೆಯಲ್ಲಿ 10 ನೇ ತರಗತಿವರೆಗೆ ವ್ಯಾಸಂಗ ಮಾಡಿ ಪಿಯು ವ್ಯಾಸಂಗವನ್ನು ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ಪಡೆದಿರುತ್ತಾರೆ.
ಅದ್ವಿತೀಯ ಸಾಧನೆಗೈದ ನಮಿತಾ ಹೆಗ್ಡೆ ರವರಿಗೆ SJG ವಿದ್ಯಾಪೀಠ ಬೆಕ್ಕಿನ ಕಲ್ಮಠದ ಡಾ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿ ಹಾಗೂ ಶಾಲೆಯ ಆಡಳಿತ ಮಂಡಳಿ,ಪಟ್ಟದ ಜಿಎಸ್ ಬಿ ಸಮಾಜ ಹಾಗೂ ಅನೇಕ ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮೂರಿನ ಯುವ ಪ್ರತಿಭೆ ಇನ್ನೂ ಹೆಚ್ಚಿನ ಸಾಧನೆಗೈದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ಆಶಿಸುತ್ತದೆ.