ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಸಾಗರ ತಾಲೂಕಿನ ಆನಂದಪುರ ಸಮೀಪದ ಲಕ್ಕವಳ್ಳಿ ಅಂಗನವಾಡಿ ಕೇಂದ್ರದ ಮಗು ಅಂಗನವಾಡಿಯಿಂದ ರಸ್ತೆ ದಾಟುವಾಗ ಅಪಘಾತವಾಗಿ ಗಾಯಗೊಂಡ ಘಟನೆಯನ್ನು ಪ್ರತಿಭಟಿಸಿ ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರು ಅಂಗನವಾಡಿಗೆ ಶುಕ್ರವಾರ ಬೀಗ ಹಾಗಿ ಪ್ರತಿಭಟನೆ ನಡೆಸಿದ್ದಾರೆ.
ಗುರುವಾರ ಮಗು ಅಂಗನವಾಡಿಯಿಂದ ಮನೆಗೆ ತೆರುಳುವಾಗ ಬೈಕ್ ಡಿಕ್ಕಿಯಾಗಿ ಮಗು ಮುಖ, ತಲೆಗೆ ಪೆಟ್ಟು ಬಿದ್ದಿದೆ. ಸಂಜೆ ಆದ ಕಾರಣ ಶುಕ್ರವಾರ ಈ ಘಟನೆ ಗ್ರಾಮಸ್ಥರ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸಾಗರ ತಾಲ್ಲೂಕಿನಲ್ಲೇ ಅತ್ಯಂತ ಹಿರಿದಾದ ಲಕ್ಕವಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪ್ರಸಕ್ತ 33ಕ್ಕಿಂತ ಹೆಚ್ಚಿನ ಮಕ್ಕಳು ಕಲಿಯುತ್ತಿವೆ. ಆದರೂ ಕಳೆದ ಮೂರು ವರ್ಷಗಳಿಂದ ಸಹಾಯಕರಿಲ್ಲದೆ ಶಿಕ್ಷಕಿ ಕೂಡ ಅಸಹಾಯಕರಾಗಿದ್ದಾರೆ. ಹಿಂದಿನ ಸಹಾಯಕರು ನಿವೃತ್ತರಾಗಿ ಮೂರು ವರ್ಷಗಳಿಗಿಂತ ಹೆಚ್ಚಾಗಿದೆ. ಅಂದಿನಿಂದಲೂ ಸ್ಥಳೀಯರು ಸಂಬಂಧ ಪಟ್ಟ ಇಲಾಖೆ ಮತ್ತು ಮಾನ್ಯ ಶಾಸಕರ ಗಮನಕ್ಕೂ ತರುತ್ತಲೇ ಬರುತ್ತಿದ್ದಾರೆ. ಆದರೆ ಇದುವರೆಗೂ ಪ್ರಯೋಜನ ಆಗಿಲ್ಲ.
ಇಲ್ಲಿನ ಅಂಗನವಾಡಿಗೆ ಲಕ್ಕವಳ್ಳಿ ಸೇರಿದಂತೆ ಇಲ್ಲಿಂದ ಸುಮಾರು ಮೂರು ಕಿ. ಮೀ. ದೂರದ ಮೂಡಾಗಲು, ಕುರುಬರ ಜಡ್ಡುಗಳಿಂದ ಮಕ್ಕಳು ಬರುತ್ತಾರೆ. ಸ್ಥಳೀಯರಲ್ಲಿ ಕೃಷಿ, ಕೂಲಿ ಕಾರ್ಮಿಕರೇ ಜಾಸ್ತಿ ಇರುವುದರಿಂದ ಪ್ರತಿದಿನ ಅಂಗನವಾಡಿಗೆ ಕರೆತಂದು, ಕರೆದೊಯ್ಯುವುದು ಕಷ್ಟದಾಯಕ. ಹೀಗಾಗಿ ಹಲವು ಬಾರಿ ಸಂಬಂಧ ಪಟ್ಟ ಇಲಾಖೆ ಮತ್ತು ಮಾನ್ಯ ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೆ ಏನೂ ಪ್ರಯೋಜನ ಆಗಿಲ್ಲ ಎನ್ನುವುದು ಪ್ರತಿಭಟನಾ ನಿರತರ ಅಳಲು.
ಈ ನಡುವೆ ಗುರುವಾರ ಮಗುವಿಗೆ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಗ್ರಾಮಸ್ಥರೆಲ್ಲ ಆತಂಕದಿಂದ ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಎಚ್ಚೆತ್ತ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೋಮೇಶ್ ಹಾಗೂ ಸದಸ್ಯೆ ನಾಗರತ್ನಮ್ಮ ಸ್ಥಳೀಯರೊಂದಿಗೆ ಸೇರಿ ನಿನ್ನೆ ಅಂಗನವಾಡಿ ಕೇಂದ್ರಕೆ ಬೀಗ ಹಾಕಿ ಸಂಬಂಧಪಟ್ಟವರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.
ಇಂತಹ ಘಟನೆ ಆಗಾಗ ಆಗುತ್ತಲೇ ಇವೆ. ಆದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಅಂಗನವಾಡಿಗೆ ಹೊಲಸು ರಾಜಕೀಯ ಕಾರಣಕ್ಕಾಗಿಯೇ ಸಹಾಯಕರ ನೇಮಕಾವಾಗುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ತಕ್ಷಣವೇ ಅಂಗನವಾಡಿಗೆ ಸಹಾಯಕರ ನೇಮಕ ಮಾಡಬೇಕು. ಇಲ್ಲದೆ ಹೋದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸೋಮೇಶ್ ಮತ್ತು ನಾಗರತ್ನ ಅವರುಗಳು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ರೂಪೇಶ್, ಗಂಗಾಧರ್ ಗೌಡ, ದೀಪು, ಪುಟ್ಟರಾಜು ಗೌಡ ಮೊದಲದವರು ಉಪಸ್ಥಿತರಿದ್ದರು.
ವರದಿ : ಬಿ ಡಿ ರವಿ