ಕರ್ನಾಟಕ ಹೈಕೋರ್ಟ್ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ (CJI) ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸುಮಾರು ಹತ್ತು ವರ್ಷಗಳ ಕಾಲ ಅಕ್ರಮ ಏಕಾಂತವಾಸವನ್ನು ಪರಿಗಣಿಸಿ ವಿಕೃತ ಕಾಮಿ ಉಮೇಶ್ ರೆಡ್ಡಿಯ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
1998ರ ಫೆಬ್ರವರಿ 28ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು 2006 ರಲ್ಲಿ ಉಮೇಶ್ ರೆಡ್ಡಿ ಮರಣದಂಡನೆ ವಿಧಿಸಿತ್ತು. ನಂತರ ಅದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಹೋಗಿದ್ದ. 2011 ರಲ್ಲಿ ಆತನಿಗೆ ನೀಡಲಾದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಅದರ ಬಳಿಕ ಆತನ ಕ್ಷಮಾದಾನ ಅರ್ಜಿಯನ್ನು ಭಾರತದ ರಾಷ್ಟ್ರಪತಿ 2013 ರಲ್ಲಿ ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಆತ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಅಲ್ಲಿಯೂ ಆತ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಂಡಿದ್ದರಿಂದ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.
ಸುನಿಲ್ ಬಾತ್ರಾ vs ದಿಲ್ಲಿ ಅಡ್ಮಿನಿಸ್ಟ್ರೇಷನ್ (1978) 4 SCC 494 ರಲ್ಲಿನ ತೀರ್ಪನ್ನು ಉಲ್ಲಂಘಿಸಿ 2006 ರಿಂದ 2016 ರವರೆಗೆ ರೆಡ್ಡಿಯನ್ನು “ಅಂಧೇರಿ ಬ್ಲಾಕ್” ನಲ್ಲಿ ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ರೆಡ್ಡಿ ಪರ ವಕೀಲರು ವಾದಿಸಿದ್ದರು. ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಅಕ್ರಮವಾಗಿ ಹತ್ತು ವರ್ಷ ಏಕಾಂತ ಶಿಕ್ಷೆಯನ್ನು ಅನುಭವಿಸಿದ್ದನ್ನು ಪರಿಗಣಿಸಿ ಮರಣದಂಡನೆಯನ್ನು ರದ್ದು ಪಡಿಸಿದೆ ಎಂದು livelaw ವರದಿ ಮಾಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆ ವಿಳಂಬ ಅಪರಾಧಿ ಯೋಗಕ್ಷೇಮದ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಉಮೇಶ್ ರೆಡ್ಡಿಯನ್ನು ಬೆಳಗಾವಿ ಜೈಲಿನಲ್ಲಿ 10 ವರ್ಷಗಳ ಕಾಲ ಏಕಾಂಗಿಯಾಗಿ ಇರಿಸಲಾಗಿತ್ತು.
ಪ್ರಕರಣದ ಹಿನ್ನೆಲೆ
ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದನು. ನಂತರ ಪೊಲೀಸ್ ಇಲಾಖೆಗೆ ಸೇರಿದ್ದ ಆತನ ವಿರುದ್ಧ ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು 9 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. ವಿಕೃತಕಾಮಿಯ ಅಟ್ಟಹಾಸಕ್ಕೆ 2000 ದ ಆರಂಭಿಕ ದಶಕದಲ್ಲಿ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಆತನ ವಿಕೃತ ಕಾಮವು ದೇಶಾದ್ಯಂತ ಸುದ್ದಿಯಾಗಿತ್ತು.
ಕಮಾಂಡರ್ ಮಗಳನ್ನೇ ಬಿಟ್ಟಿರಲಿಲ್ಲ ವಿಕೃತ ಕಾಮಿ.!
ಸೇನಯಲ್ಲಿದ್ದಾಗ ಕಮಾಂಡರ್ ಒಬ್ಬರ ಮನೆಯಲ್ಲಿ ಡ್ಯೂಟಿಯಲ್ಲಿರುವಾಗ ಕಮಾಂಡರ್ ಮಗಳ ಮೇಲೆಯೆ ಅತ್ಯಾಚಾರಕ್ಕೆ ಯತ್ನಿಸಿ, ಸೇನೆಯಿಂದ ಹೊರಬಿದ್ದಿದ್ದ. ಬಳಿಕ ಚಿತ್ರದುರ್ಗಕ್ಕೆ ಬಂದಿದ್ದ. ಇದು ಹೊರಜಗತ್ತಿಗೆ ಗೊತ್ತಿರುವ ಈತನ ಮೊದಲ ಪ್ರಕರಣ. ಹೀಗೆ ಬಂದವ ಮತ್ತೆ ಪೊಲೀಸ್ ಧಿರಿಸು ತೊಟ್ಟು ಜಿಲ್ಲಾ ಸಶಸ್ತ್ರಮೀಸಲು ಪಡೆ ಸೇರಿದ್ದ.
ಉಮೇಶ್ ರೆಡ್ಡಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಒಂಟಿ ಮಹಿಳೆಯರಿದ್ದ ಮನೆಗೆ ನುಗ್ಗಿ ರೂಮಿನಲ್ಲಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಉಮೇಶ್ ರೆಡ್ಡಿಯ ಬಗ್ಗೆ ನಾಗರಿಕರು ಭಯ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸದ್ಯ, ಉಮೇಶ್ ರೆಡ್ಡಿಯ ಮರಣದಂಡನೆಯ ರದ್ದು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.