ಸೊರಬ: ಪರಿಶಿಷ್ಟ ಜಾತಿಗೆ ಸೇರಲು ಮಡಿವಾಳ ಸಮಾಜ ಎಲ್ಲ ರೀತಿಯ ಲಕ್ಷಣ ಹೊಂದಿದ್ದು, ಸಮಾಜದ ನಿಯೋಗ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲಿದೆ ಎಂದು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ರಾಜು ಎಂ. ತಲ್ಲೂರು ಹೇಳಿದರು.
ಸೋಮವಾರ ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಡಿವಾಳ ಸಮಾಜ ಅತ್ಯಂತ ಹಿಂದುಳಿದಿದ್ದು, ಪ್ರೊ. ಅನ್ನಪೂರ್ಣ ಅವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅವರು ಮಡಿವಾಳ ಸಮಾಜದ ಮುಖಂಡರೊಂದಿಗೆ ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಹಿರಿಯರ ಜೊತೆಗೆ ತಾವು ಸಹ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ರಚನೆಯಾದ ಬಳಿಕ ಮೊದಲ ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್. ಕುಮಾರ್ ಬಂಗಾರಪ್ಪ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಸಮಾಜಕ್ಕೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪ್ರಸ್ತುತ ನಿಗಮದಲ್ಲಿ 15 ಕೋಟಿ ರೂ., ಅನುದಾನವಿದ್ದು, ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರನ್ನು ಕೋರಲಾಗುವುದು. ಜೊತೆಗೆ, ಮಡಿವಾಳ ಸಮಾಜ ಮಾತ್ರವಲ್ಲದೇ ತಾಲೂಕಿನ ಅಭಿವೃದ್ಧಿ ಹಾಗೂ ಇತರೆ ಸಮುದಾಯಗಳ ಅಭಿವೃದ್ಧಿಗೆ ಆಯಾ ಸಮುದಾಯದ ನಿಗಮದ ಅಧ್ಯಕ್ಷರನ್ನು ಭೇಟಿ ಮಾಡಿ ಸವಲತ್ತುಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಈ ಮೂಲಕ ಸರ್ಕಾರ ನೀಡಿದ ಜವಾಬ್ದಾರಿಯನ್ನು ನಿಬಾಯಿಸುವುದಾಗಿ ತಿಳಿಸಿದರು.
ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ನ.15 ರಂದು ಬಿಜೆಪಿಯಿಂದ ನಡೆಯಲಿರುವ ಜನ ಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಚಿವರು, ಜಿಲ್ಲೆಯ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದು, ಸಮಾವೇಶದ ಯಶಸ್ವಿಗೆ ಸಹಕರಿಸುವ ಜೊತೆಗೆ ಸರ್ಕಾರದ ಭಾಗವಾಗಿ ಪಾಲ್ಗೊಳ್ಳುತ್ತೇನೆ. ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುತ್ತಾ, ಕ್ಷೇತ್ರ ಮಾತ್ರವಲ್ಲದೇ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದರು.