ಅರಿವಿನ ದಾರಿ ಸುಖ ಶಾಂತಿಗೆ ಮೂಲ – ಶ್ರೀ ರಂಭಾಪುರಿ ಜಗದ್ಗುರುಗಳು|Malali

ರಿಪ್ಪನ್‌ಪೇಟೆ : ಮನುಷ್ಯನ ಜೀವನ ಅರಿವು ಆದರ್ಶಗಳಿಂದ ಸದೃಢಗೊಳ್ಳಬೇಕು.ಅರಿವಿನ ದಾರಿ ಸುಖ ಶಾಂತಿಯ ಬದುಕಿಗೆ ಮೂಲ ಅಡಿಪಾಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.


ರಿಪ್ಪನ್‌ಪೇಟೆ ಸಮೀಪದ ಮಳಲಿ ಮಹಾಸಂಸ್ಥಾನ ಮಠದಲ್ಲಿ ಅಯೋಜಿಸಲಾದ ಕಾರ್ತೀಕ ದೀಪೋತ್ಸವ ಮತ್ತು ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಹೊರಗಿರುವ ಕತ್ತಲೆ ಕಳೆಯಲು ದೀಪ ಬೇಕು. ಮನುಷ್ಯನ ಒಳಗಿರುವ ಅಜ್ಞಾನ ಎಂಬ ಕತ್ತಲೆ ಕಳೆಯಲು ಗುರು ಬೋಧಾಮೃತ ಅವಶ್ಯಕ. ದೀಪ ಬೆಳಗುತ್ತಿದೆ. ಆದರೆ ಉರಿಯುತ್ತಿಲ್ಲ. ಮನುಷ್ಯ ಉರಿಯುತ್ತಿದ್ದಾನೆ ಹೊರತು ಬೆಳಗುತ್ತಿಲ್ಲ. ಆಧ್ಯಾತ್ಮ ಜ್ಞಾನದ ಕೊರತೆಯಿಂದಾಗಿ ಮನುಷ್ಯ ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಹಚ್ಚುವುದಾದರೆ ದೀಪ ಹಚ್ಚು. ಆದರೆ ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು. ಆದರೆ ದೀಪ ಆರಿಸಬೇಡ ಎಂದು ಆಚಾರ್ಯರು ಸ್ಪಷ್ಟವಾಗಿ ಹೇಳುತ್ತಾರೆ. ಮನುಷ್ಯನ ಮನಸ್ಸು ಜೀವನ ಮತ್ತು ಶ್ವೇಚ್ಛಾಚಾರ ಹೊಂದಿ ಸಂಕುಚಿತಗೊಂಡು ಅನಾಗರಿಕ ಮಾನಸಿಕ ಶಾಂತಿ ಕಳೆದುಕೊಳ್ಳುತ್ತಿದ್ದಾನೆ.


ಮಳಲಿ ಸಂಸ್ಥಾನ ಮಠದಲ್ಲಿ ಪ್ರತಿ ವರ್ಷ ಕಾರ್ತೀಕ ಧರ್ಮ ದೀಪೋತ್ಸವ ಸಮಾರಂಭ ಭಕ್ತ ಸಂಕುಲದ ಸಹಕಾರದಿಂದ ವಿಜೃಂಭಣೆಯಿಂದ ಜರುಗುತ್ತಿರುವುದು ತಮಗೆ ಸಂತೋಷ ತಂದಿದೆ. ಮಠಾಧ್ಯಕ್ಷರಾದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಭಕ್ತರ ಭಾವನೆಗಳಿಗೆ ಸ್ಪಂದಿಸಿ ಅತ್ಯುತ್ತಮ ಮಾಡುತ್ತಿದ್ದಾರೆ. ಶ್ರೀಗಳವರ ಅಧಿಕಾರದ ಅವಧಿಯಲ್ಲಿ ಶ್ರೀ ಮಠ ಇನ್ನಷ್ಟು ಮತ್ತಷ್ಟು ಬೆಳೆದು ಭಕ್ತ ಸಮೂಹದ ಶ್ರೇಯಸ್ಸಿಗೆ ದಾರಿದೀಪವಾಗಲೆಂದರು.




ಸಮಾರಂಭ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಭಾರತೀಯ ಸಂಸ್ಕೃತಿಯ ಪುನಶ್ವೇತನಕ್ಕೆ ಮಠಗಳ ಕೊಡುಗೆ ಅಮೂಲ್ಯ, ಜಾತಿ ಮತ ಪಂಥಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬದುಕಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಮಲೆನಾಡಿನ ಮಡಿಲಲ್ಲಿರುವ ಮಳಲಿ ಮಠ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು ಸರ್ವ ಭಕ್ತರಿಗೆ ಸನ್ಮಾರ್ಗ ದರ್ಶನ ನೀಡುತ್ತಿರುವುದು ಸಂತಸ ತಂದಿದೆ ಎಂದರು.




ಬೇಲೂರು ಶಾಸಕ ಕೆ.ಎಸ್.ಲಿಂಗೇಶ, ಸಾಗರ ಶಾಸಕ ಹರತಾಳು ಹಾಲಪ್ಪ, ಎಸ್.ಎಸ್.ಜ್ಯೋತಿಪ್ರಕಾಶ,ಆರ್ ಎನ್ ಮಂಜುನಾಥ್ ಗೌಡ, ಉದ್ಯಮಿ ಕೆ.ಆರ್.ಪ್ರಕಾಶ, ಹೆಚ್.ಎಸ್.ಜಗದೀಶ ,ಬಿ ಯುವರಾಜ, ಕೆ.ಎಂ.ಚನ್ನಬಸಪ್ಪಗೌಡ್ರು, ವೀರೇಶ ಆಲವಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಂಕಾಪುರ, ಕವಲೇದುರ್ಗ, ಬೇರುಗಂಡಿ, ಸಿದ್ಧರಬೆಟ್ಟ, ಶಾಂತಪುರ, ಕೋಣಂದೂರು, ಸಂಗೊಳ್ಳಿ, ಕಡೇನಂದಿಹಳ್ಳಿ, ಹನುಮಾಪುರ, ಹಾರನಹಳ್ಳಿ, ಕುಮಾರಪಟ್ಟಣ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.



Leave a Reply

Your email address will not be published. Required fields are marked *