ಶಾಂತಿಯ ಹಬ್ಬವಾದ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಬೇಸರ ವ್ಯಕ್ತಪಡಿಸಿದ ಟಿಪ್ ಟಾಪ್ ಬಶೀರ್ | ಗಾಂಜಾ ವ್ಯಸನಿಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಆಗ್ರಹ |Eidmilad

ಈದ್ ಮಿಲಾದ್ ಆಚರಣಿಯ ಮೆರವಣಿಗೆಯಲ್ಲಿ ಭಾನುವಾರ ಕೆಲವೆಡೆ ಮುಸ್ಲಿಂ ಯುವಕರು ಡಿಜೆ ಹಾಡುಗಳನ್ನು ಹಾಕಿಕೊಂಡು, ಕುಣಿದು ಕುಪ್ಪಳಿಸಿರುವುದರ ಬಗ್ಗೆ ಸಾಗರ ನಗರ ಸಭೆ ಸದಸ್ಯ ಬೇಸರ ವ್ಯಕ್ತಪಡಿಸಿ ಜಿಲ್ಲೆಯ ಜನತೆಯ ಕ್ಷಮೆ ಕೋರಿದ್ದಾರೆ.

ಶಾಂತಿಯುತ ಈದ್ ಮೆರವಣಿಗೆಯ ನಿಜವಾದ ರೀತಿ, ರಿವಾಜುಗಳನ್ನು ಗಾಳಿಗೆ ತೂರಿದ್ದಾರೆ. ಎಂದಿಗೂ ಇಲ್ಲದ ಇಂತಹ ಕೆಟ್ಟ ಆಚರಣೆಗಳು ಈಗ ಯಾಕೆ ಹುಟ್ಟಕೊಂಡಿದ್ದಾವೋ ಗೊತ್ತಿಲ್ಲ, ಆದರೆ ಇದು ಶಾಂತಿಧೂತ ಮಹಮದ್ ಪೈಂಗಂಬ‌ ಅವರಿಗೆ ಮಾಡಿದ ಅವಮಾನವಾಗಿದ್ದು, ಇದು ನನ್ನ ಮನಸ್ಸಿಗೆ ತೀವ್ರ ನೋವು ತಂದಿದೆ. ಹಾಗಾಗಿ ನಾನು ಇಂತಹ ಕೆಟ್ಟ ವರ್ತನೆಗಳನ್ನು ತೋರಿದ ಕೆಲವು ಮುಸ್ಲಿಂ ಯುವಕರ ತಪ್ಪಿಗೆ ಜಿಲ್ಲೆಯ ಜನತೆಯ ಕ್ಷಮೆ ಕೋರುತ್ತೇನೆ ಎಂದು ಬಷೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈದ್ ಮಿಲಾದ್ ಮಾತ್ರವಲ್ಲ ಮುಸ್ಲಿಂ ಸಮಾಜದ ಯಾವುದೇ ಹಬ್ಬಗಳಲ್ಲಿನ ಮೆರವಣಿಗೆಗಳು ಶಾಂತಿಯುತವಾಗಿ ನಡೆಯಬೇಕು. ಅದರಲ್ಲೂ ಈದ್ ನಂತಹ ಪವಿತ್ರವಾದ ಹಬ್ಬದಂದು ಮುಸ್ಲಿಂ ಪುರುಷರು, ಯುವಕರು ಚೀಲ ಬಟ್ಟೆಗಳನ್ನು ತೊಟ್ಟು, ಮೆರವಣಿಗೆಯಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳಬೇಕು, ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡುವಂತಹ ಯಾವುದೇ ಶಬ್ದದ ಅಬ್ಬರ ಇರಬಾರದು.

ಡಿಜೆ ಹಾಕುವುದು, ಹಾಡುಗಳಿಗೆ ಕುಣಿಯುವುದು ಇಲ್ಲವೇ ಇಲ್ಲ. ಯಾಕಂದ್ರೆ ಪ್ರವಾದಿ ಮಹಮದ್‌ ಪೈಗಂಬರ್ ಅವರು ಹಸಿದವರು ಯಾರೇ ಅಗಿರಲಿ ಅವರಿಗೆ ಊಟ ಕೊಡಿ ಎಂದು ಹೇಳಿದವರು. ಇನ್ನೊಬ್ಬರ ಸಂಕಷ್ಟಕ್ಕೆ ನೆರವಾಗಿ ಅಂತ ಬೋಧಿಸಿದವರು. ಆದರೆ ಇಂದು ಅವರ ಆದರ್ಶಗಳಿಗೆ, ಚಿಂತನೆಗಳಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಕಂಡು ಬಂದಿದೆ.

ಭಾನುವಾರ ಸಾಗರ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿನ ಈದ್ ಮಿಲಾದ್ ಆಚರಣೆಯ ಮೆರವಣಿಗೆಗಳಲ್ಲಿ ಡಿಜೆ ಅಬ್ಬರ, ಕೆಲವು ಯುವಕರ ಕುಣಿತಗಳನ್ನು ಕಂಡು ನನಗೆ ತುಂಬಾ ನೋವು ತಂದಿದೆ. ತುಂಬಾ ದುಃಖ ತಂದಿದೆ. ಮನಸ್ಸಿಗೆ ಖೇದವಾಗಿದೆ ಎಂದು ಬಷೀರ್ ತಿಳಿಸಿದ್ದಾರೆ.

ಇಸ್ಲಾಂ ಧರ್ಮ ಶಾಂತಿ, ಸೌಹಾರ್ದಕ್ಕೆ ಹೆಸರಾದ ಧರ್ಮ ಅದಕ್ಕೆ ಅಪಚಾರ ಎಸಗುವಂತೆ ಮುಸ್ಲಿಂ ಸಮುದಾಯದ ಕೆಲವು ಯುವಕರು ಭಾನುವಾರ ನಡೆದುಕೊಂಡರು. ಅವರು ಈ ರೀತಿ ನಡೆದುಕೊಂಡಿದ್ದಕ್ಕೆ ಧರ್ಮಗುರುಗಳು ಹೊಣೆ ಹೊರಬೇಕಿದೆ. ಯಾಕಂದ್ರೆ ಅವರನ್ನು ಧರ್ಮದ ರೀತಿ ರಿವಾಜುಗಳಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವಂತೆ ಪ್ರೇರಿಪಿಸಬೇಕಿತ್ತು.

ಅಲ್ಲಿ ಅವರು ತಮ್ಮ ಜವಾಬ್ದಾರಿ ಮರೆತಿದ್ದಾರೆ, ಅದಕ್ಕಾಗಿಯೇ ಕೆಲ ಯುವಕರು ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಹಾಕಿಕೊಂಡು ಕುಣಿದಿದ್ದಾರೆ. ‘ಇಲ್ಲಿ ಕೆಲವರು ಗಾಂಜಾದಂತಹ ಮತ್ತಿಗೆ ಸಿಲುಕಿದವರೆನ್ನಲಾಗಿದೆ. ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಇಂತಹವರನ್ನು ನಿಯಂತ್ರಣ ಮಾಡಬೇಕಿದೆ ಎಂದೂ ಸಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲ್ಲದಿದ್ದರೆ ಮನಸ್ಸಿಗೆ ಘಾಸಿಗೊಳಿಸುವಂತಹ ಇಂತಹ ಕೆಟ್ಟ ವರ್ತನೆಗಳು ಹೆಚ್ಚಾಗಬಹುದು. ಅಷ್ಟು ಮಾತ್ರವಲ್ಲ, ಮುಸ್ಲಿಂ ಸಮಾಜಕ್ಕೆ ಕೆಟ್ಟ ಹೆಸರು ಬರುವಂತಾಗುತ್ತದೆ ಈ ಕಾರಣಕ್ಕೆ ಧರ್ಮಗುರುಗಳು ಈ ಯುವಕರಿಗೆ ಬುದ್ಧಿವಾದ ಹೇಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕೆಲಸದ ನಿಮಿತ್ತ ಬೆಂಗಳೂರಿನಲ್ಲದ್ದ ನನಗೆ ಕೆಲವು ಸುದ್ದಿ ಮಾಧ್ಯಮಗಳ ಮೂಲಕ ಇದನ್ನು ಕಂಡ ನೋವುಂಟಾಯಿತು. ಅದೇ ಕಾರಣಕ್ಕೆ ನನ್ನ ಮನಸ್ಸಿನ ಭಾವನೆಯನ್ನು ಇಲ್ಲಿ ವ್ಯಕ್ತಪಡಿಸಿದ್ದೇನೆ. ಹಾಗೆಯೇ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಂಡ ಡಿಜೆ ಅಬ್ಬರ, ಯುವಕರ ಕುಣಿತದಂತಹ ವರ್ತನೆಗಳಿಗಾಗಿ ಇಡೀ ಜಿಲ್ಲೆಯ ಜನತೆಯ ಕ್ಷಮೆ ಕೋರುತ್ತೆನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *