ರಿಪ್ಪನ್ ಪೇಟೆ : ಏಳು ವರ್ಷದ ಮಗುವಿನ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಮಗನನ್ನು ಬದುಕಿಸುವುದಕ್ಕೆ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಮೆದುಳು ನಿಷ್ಕ್ರೀಯಗೊಂಡ ಬಳಿಕ ಬಾಲಕ ಸಾವಿನ ಮನೆಯ ಅಂಚು ತಲುಪಿಯಾಗಿತ್ತು.
ಎತ್ತಿ ಮುದ್ದಾಡಿ ಸಾಕಿ ಸಲುಹಿದ ಪುಟ್ಟ ಮಗನ ಸಾವಿನ ನೋವಿನ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮಗನ ಸಾವಿನ ನೋವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಹೌದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಸವಾಪುರ ಗ್ರಾಮದ ಜಗನ್ನಾಥ್ ಹಾಗೂ ಆಶಾ ದಂಪತಿಯ 2ನೇ ತರಗತಿ ಓದುತ್ತಿದ್ದ 7 ವರ್ಷದ ಬಾಲಕ ಬಿ.ಜೆ ಆರ್ಯನ್ ಗೆ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿತ್ತು. ಕೂಡಲೇ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೆದುಳು ನಿಷ್ಕ್ರೀಯಗೊಂಡು ಪುಟ್ಟ ಬಾಲಕ ಆರ್ಯನ್ ಸಾವನ್ನಪ್ಪಿದ್ದರು.
ಮಗನ ಸಾವಿನ ದುಃಖದ ನೋವಿನಲ್ಲಿ ಪೋಷಕರನ್ನು ಆತನ ಅಂಗಾಂಗ ದಾನ ಮಾಡುವಂತೆ ವೈದ್ಯರು ಮನವೊಲಿಕೆ ಮಾಡಿದರು. ಇದಕ್ಕೆ ಒಪ್ಪಿದ್ದರಿಂದಾಗಿ ಬಾಲಕ ಬಿ.ಜೆ ಆರ್ಯನ್ ಕಣ್ಣನ್ನು ಇಬ್ಬರಿಗೆ ದಾನ ಮಾಡಿದ್ದಾರೆ. ಹೀಗಾಗಿ ಇಬ್ಬರ ಬಾಳಿನಲ್ಲಿ ಬಿ.ಜೆ ಆರ್ಯನ್ ಬೆಳಕಾಗಿದ್ದಾರೆ. ಈ ಮೂಲಕ ಆರ್ಯನ್ ಪೋಷಕರು ತಮ್ಮ ಮಗನ ಸಾವಿನ ದುಖದಲ್ಲಿಯೂ ನೇತ್ರದಾನ ಮಾಡಿ, ಇಬ್ಬರ ಬಾಳಿಗೆ ಬೆಳಕಾಗಿ ಸಾರ್ಥಕತೆಯನ್ನು ಮೆರೆದಿದ್ದಾರೆ.