Headlines

ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು : ಹೃದಯ ಹಿಂಡುತ್ತಿರುವ ಕುಟುಂಬಸ್ಥರ ಆಕ್ರಂದನ

ಮನೆಯ ಮುಂದಿನ ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ೧೧ ತಿಂಗಳ ಮಗು ಅಕ್ಷಯ್ ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ.

ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಚಿಸಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.

ಮಹಾಲಯ ಅಮವಾಸ್ಯೆ ದಿನವಾದ ಭಾನುವಾರ ಮನೆಯವರು ವಾಹನ ತೊಳೆಯುವುದು, ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟ ಸಂದರ್ಭ, ಅಂಬೆಗಾಲು ಇಡುತ್ತಿದ್ದ ಮಗು ಅರಿವಿಲ್ಲದಂತೆ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ.
ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲೆಂದು ನೀರು ತೆಗೆಉಲು ತೊಟ್ಟಿಗೆ ಬಗ್ಗಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ.

ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯಾಧಿಕಾರಿಗಳ ತಂಡ ಮಗುವಿನ ಪಾರ್ಥಿವ ಶರೀರವನ್ನು ಪೋಷಕರಿಗೆ ನೀಡುವಾಗ ಕುಟುಂಬಸ್ಥರ ಆಕ್ರಂದನ ನೆರೆದಿದ್ದ ಜನರ ಹೃದಯ ಹಿಂಡುತ್ತಿತ್ತು. ಮೃತ ಮಗುವಿನ ಮೂರು ವರ್ಷದ ಅಕ್ಕ ನಕ್ಷತ್ರ ಹಾಗೂ ತಂದೆ ತಾಯಿಯ ಪಾಡು ಹೇಳತೀರದಾಗಿತ್ತು.

ಭಾನುವಾರ ಸಂಜೆಯೇ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಪುಟ್ಟ ಮಗುವಿನ ಶವ ಸಂಸ್ಕಾರ ನಡೆಯಿತು. ಇಡೀ ಊರಿಗೆ ಊರೇ ಶವಸಂಸ್ಕಾರದಲ್ಲಿ ಭಾಗಿಯಾಗಿದ್ದು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಸಂಪೂರ್ಣ ಮೌನ ಆವರಿಸಿದೆ.

Leave a Reply

Your email address will not be published. Required fields are marked *