ಅಂಗಡಿಗಳಲ್ಲಿ ಕೋಳಿ ಕದಿಯುತ್ತಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬಡಿದು ಕೊಂದಿರುವಂತಹ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಮೃಗವಧೆಯ ರಾಜು ಹೇಗೆ ಸಾವನ್ನಪ್ಪಿರುವ ವಿಚಾರ ಇದೀಗ ಹೊರಕ್ಕೆ ಬಂದಿದೆ. ಆ ಊರು ಹಾಗೂ ಅಲ್ಲಿನ ಸ್ಥಳಿಯರು ಹೇಳುವ ಪ್ರಕಾರ ಆತ ಅಡಿಕೆ ಗೊನೆ ತೆಗೆಯುವವನಾಗಿದ್ದು ಹಾಗೂ ಮದ್ಯ ವ್ಯಸನಿಯಾಗಿದ್ದ. ಕಳೆದ ಮೂರು ದಿನಗಳಿಂದ ರಾಜು ಮನೆಯಲ್ಲಿರಲಿಲ್ಲ.
ಕೋಳಿಯಂಗಡಿಗಳಲ್ಲಿ ಕೋಳಿ ಕದಿಯುತ್ತಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಶಿಶಿರ, ಶಿವು ಮತ್ತು ವಿಜಯೇಂದ್ರ ಎಂಬ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಆತನ ಕುಟುಂಬದ ಸದಸ್ಯರೊಬ್ಬರಿಗೂ ಹೇಳಿದ್ದಾರೆ ಎಂಬ ಮಾಹಿತಿ ಸ್ಥಳೀಯವಾಗಿ ಚರ್ಚೆಯಲ್ಲಿದೆ.
ಕೋಳಿಕದ್ದ ಕಾರಣಕ್ಕಾಗಿ, ಆತನ ಮೇಲೆ ಹಲ್ಲೆ ನಡೆದಿದ್ದು, ಆ ನಂತರ ಆತನನ್ನು ತನ್ನ ಮನೆಬಾಗಿಲಿಗೆ ತಂದು ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಅದಾದ ಮೇಲೆ ಮನೆಯಲ್ಲಿ ರಾಜು ಸಾವನ್ನಪ್ಪಿದ್ದಾನೆ. ಸತ್ಯಾಸತ್ಯತೆ ಏನು ಎಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಿದೆ.
ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರು ಹಾಗೂ ಮಾಳೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಒಯ್ಯಲಾಗಿದೆ.
ಒಂದು ಕಾಲದಲ್ಲಿ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಹೇಯ ಪ್ರಕರಣಗಳು ಸುಸಂಸ್ಕೃತ ಮಲೆನಾಡಿನಲ್ಲೂ ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ.