ತೀರ್ಥಹಳ್ಳಿ : ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ಸ್ಥಳೀಯ ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ
ನೀಡಲಾಗುತ್ತಿದೆ ಎಂದು ಮೇಲಿನ ಕುರುವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಹೊರಬೈಲು ಪ್ರಭಾಕರ್ ಆರೋಪಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಛೇರಿ ಎದುರು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅವಿನಾಶ್ ರವರು ಕಳೆದ ಕೆಲ ದಿನಗಳಿಂದ ಮೇಲಿನ ಕುರುವಳ್ಳಿಯಲ್ಲಿನ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಬಂದು ಕಾರ್ಮಿಕರು ಕಷ್ಟ ಪಟ್ಟು ಮಾಡಿರುವಂತಹ ಕಲ್ಲು ಕಂಬ 150 ಹಾಗೂ ಇನ್ನಿತರ ಕಲ್ಲಿನ ಸಾಮಾಗ್ರಿಗಳನ್ನು ಉದ್ದೇಶಪೂರ್ವಕವಾಗಿ ಒಡೆದು ಹಾಕಿದ್ದು, ಇದು ಅಕ್ಷಮ್ಯ ಅಪರಾಧವಾಗಿರುತ್ತದೆ ಮತ್ತು ಅಧಿಕಾರ ವ್ಯಾಪ್ತಿಗೆ ಮೀರಿದ ಕೃತ್ಯವಾಗಿರುತ್ತದೆ.
ಕಲ್ಲುಕಂಬ ಹಾಳುಗೆಡವಿದವರ ವಿರುದ್ಧ ಕಾನೂನು ಕ್ರಮ ಗೊಳ್ಳಬೇಕು. ಈ ರೀತಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವ ಅಧಿಕಾರಿ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಗ್ರಾ.ಪಂ. ಸದಸ್ಯ ನಿಶ್ಚಲ್ ಜಾದೂಗಾರ್ ಮಾತಾನಾಡಿ ಕಲ್ಲು ಕುಟಿಕರು ಕಲ್ಲು ಬಂಡೆಯೊಂದಿಗೆ ಗುದ್ದಾಡಿ ಕಲ್ಲು ಸಾಮಾಗ್ರಿಗಳನ್ನು ತಯಾರಿಸುವ ಕಠಿಣಶ್ರಮ ಜೀವಿಗಳಾಗಿದ್ದು ಇವರ ವೃತ್ತಿ ಬದುಕಿಗೆ ಅಡ್ಡಿ ಉಂಟು ಮಾಡುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇದೇ ರೀತಿ ಅಮಾಯಕ ಕಾರ್ಮಿಕರ ಮೇಲೆ ಅದಿಕಾರಿಗಳು ದರ್ಪ ಮುಂದುವರೆದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ
ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮೇಲಿನಕುರುವಳ್ಳಿ ಗ್ರಾ.ಪಂ. ಅಧ್ಯಕ್ಷೆ ಭವ್ಯಾ ರಾಘವೇಂದ್ರ, ಉಪಾಧ್ಯಕ್ಷ ಹೊರಬೈಲು ಪ್ರಭಾಕರ್, ಸದಸ್ಯರಾದ ಯು.ಡಿ. ವೆಂಕಟೇಶ್, ಅನಿತಾ ಪ್ರವೀಣ್, ಆನಂದ್ ಸಿ., ಸುಧಾ ಕೃಷ್ಣಕುಮಾರ್, ನಿಶ್ಚಲ್ ಜಾದೂಗಾರ್ ಸೇರಿ ಹಲವರು ಉಪಸ್ಥಿತರಿದ್ದರು.
ವರದಿ : ಅಕ್ಷಯ್ ಕುಮಾರ್