ಹೊಸನಗರ: ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಮುಂದಿನ ವರ್ಷ ನಡೆಯುವ ವಿಧಾನಸಬೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ನಮ್ಮಲ್ಲಿ ಯಾವುದೇ ಒಡಕಿಲ್ಲದೇ ಚುನಾವಣೆ ಎದುರಿಸೋಣ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಮ್ಮುಖದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರು.
ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳ ಆಚರಣೆ ಪ್ರಯುಕ್ತ ಸ್ವಾತಂತ್ರ್ಯ ಬರಲು ಕಾರಣರಾದ ಎಲ್ಲ ಮಹಾನೀಯರಿಗೆ ಗೌರವ ಸೂಚಕವಾಗಿ ಹೊಸನಗರ ತಾಲ್ಲೂಕು ಮಾವಿನಕಟ್ಟೆಯಿಂದ ಸುಮಾರು 16 ಕಿಮೀ ಕಾಲು ನಡಿಗೆ ಜಾಥಾವನ್ನು ಏರ್ಪಡಿಸಲಾಗಿದ್ದು ಕಾಲ್ನಡಿಗೆ ಜಾಥಾ ಮುಗಿಸಿ ಕಾಂಗ್ರೆಸ್ ಕಛೇರಿ ಗಾಂಧಿ ಮಂದಿರದಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದರು.
ಭಾರತ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಅನೇಕ ದೇಶ ಭಕ್ತರ ಪರಿಶ್ರಮವಿದೆ ಸ್ವಾತಂತ್ರ್ಯ ಪಡೆಯಲು ಗಣ್ಯಾತಿ ಗಣ್ಯರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ 75ನೇ ಸ್ವಾತಂತ್ರ್ಯ ವರ್ಷದಲ್ಲಿ ಅವರ ನೆನಪು ಮಾಡುವುದು ಮುಖ್ಯವಾಗಿದೆ ಅವರ ನೆನಪಿಗಾಗಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದೇವೆ. ಇಂದು ದೇಶಭಕ್ತರ ನೆನಪು ಮಾತ್ರ ಮಾಡಿಕೊಳ್ಳಬಹುದೇ ಹೊರತು ಬೇರೆನೂ ಮಾಡಲು ಸಾಧ್ಯವಿಲ್ಲ. ಅಂದು ಅವರ ಹೋರಾಟದ ಫಲವಾಗಿಯೇ ಭಾರತ ದೇಶ ಸ್ವಾತಂತ್ರ್ಯ ಪಡೆಯುಲು ಸಾಧ್ಯವಾಗಿದ್ದು ಇಲ್ಲವಾದರೆ ಬ್ರಿಟಿಷರ ಕೈಗೊಂಬೆಯಾಗಿ ಇರಬೇಕಾಗಿತ್ತು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೆ ಭಾರತ ದೇಶದ ಎಲ್ಲ ಪ್ರಜೆಗಳು ಎಲ್ಲರೂ ಒಟ್ಟಾಗಿ ದೇಶ ಕಟ್ಟಿ ಬೆಳೆಸುವ ಕಾರ್ಯ ಮಾಡೋಣ ಎಂದರು.
ಸುಳ್ಳಿನ ವ್ಯಾಪಾರ ಮಾಡುವುದೇ ಬಿಜೆಪಿಯ ಧ್ಯೇಯವಾಗಿದೆ. ಬಿಎಸ್ಎನ್ಎಲ್ ಸಂಸ್ಥೆಯನ್ನು 5,000 ಕೋಟಿ ರೂ.ಗಳಿಗೆ ಮಾರಾಟ ಮಾಡೋದು ಕೇಂದ್ರದ ಹುನ್ನಾರವಾಗಿದೆ. ಕಾಂಗ್ರೆಸ್ ಪಕ್ಷದ ಸಾಧನೆ ಧೋರಣೆ ನಮ್ಮ ಪಕ್ಷದಂತೆ ಹೇಳುವ ಬಿಜೆಪಿ ನಿಲುವು ಹಾಸ್ಯಾಸ್ಪದವಾಗಿದೆ. ಇನ್ನು ಬಿಜೆಪಿಯ ಮುಂದಿನ ಗುರಿ ಅಣೆಕಟ್ಟು, ಆಸ್ಪತ್ರೆ, ಬಸ್, ನಿಲ್ದಾಣಗಳನ್ನು ಮಾರುವುದಾಗಿದೆ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ನಿರ್ಮಾಣವಾಗುತ್ತಿದೆ. ಮಾಧ್ಯಮಗಳು ಬಿಜೆಪಿಯ ತುತ್ತೂರಿ ಆಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಹಕಾರ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷರಾದ ಆರ್ ಎನ್ ಮಂಜುನಾಥ್ ಗೌಡ ಮಾತನಾಡಿ, ಈ ನಡಿಗೆ ಎಲ್ಲಾ ಸಮುದಾಯದ ಶಕ್ತಿಯಾಗಿದೆ. ಹಿರಿಯ ರಾಜಕಾರಣಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಪಕ್ಷವೇ ಬೇರೆ ಈಗಿನ ಮೋದಿಯ ಬಿಜೆಪಿ ಪಕ್ಷವೇ ಬೇರೆ ಈಗಿನದು ನಕಲಿ ಬಿಜೆಪಿ ಪಕ್ಷ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರನ್ನು ಸನ್ಮಾನಿಸಲಾಯಿತು.
ಈ ಕಾಂಗ್ರೆಸ್ ಜಾಥಾದಲ್ಲಿ ಸಾಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎರಗಿ ಉಮೇಶ್, ಚಂದ್ರಮೌಳಿ ಗೌಡ, ತಾಲ್ಲೂಕು ಅಧ್ಯಕ್ಷ ಬಿ.ಜಿ.ನಾಗರಾಜ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಕಾಂಗ್ರೆಸ್ ಪಕ್ಷದ ಹಿರಿಯರಾದ ಶ್ರೀನಿವಾಸ್ ಕಾಮತ್, ಪ್ರಭಾಕರ್, ಜಯನಗರ ಗುರು, ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ. ಪರಮೇಶ್,ಆಸೀಫ಼್ ಭಾಷಾಸಾಬ್, ಉಬೇದುಲ್ಲಾ ಷರೀಫ್ ಮಾವಿನಕಟ್ಟೆ ನಾಗರಾಜ್ ಗೌಡ, ವೇದಾಂತಪ್ಪ ಗೌಡ, ಮಹೇಂದ್ರ, ನಾಗೇಶ್, ಬೃಂದಾವನ ಪ್ರವೀಣ್, ಮಂಜುನಾಥ, ಜಯಶೀಲಪ್ಪ ಗೌಡ,ಚಿಗುರು ಶ್ರೀಧರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.