ಕಳೆದ ಹಲವು ದಿನಗಳಿಂದ ವಿವಾದಗಳಿಂದಲೇ ಸುದ್ದಿಯಲ್ಲಿರುವ ಹೊಂಬುಜ ವ್ಯವಸಾಯ ಸಹಕಾರ ಸಂಘದ ಐವರು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೊಂಬುಜಾ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ಐವರು ರಾಜೀನಾಮೆ ನೀಡಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಹಿಂದೆ ಹಲವು ಬಾರಿ ಹೊಂಬುಜಾ ಸೊಸೈಟಿಯಲ್ಲಿ ಅಕ್ರಮ ನಡೆದಿದೆ ಎಂದು ಷೇರುದಾರರು ಆರೋಪಿಸುತಿದ್ದರು ತಿಪ್ಪೆ ಸಾರಿಸುತ್ತಿದ್ದ ಸಹಕಾರ ಇಲಾಖೆ ಈಗ ನಡೆದ ಆಡಿಟ್ ವರದಿಯಿಂದ ದಂಗು ಬಡಿದು ಕೂತಿದೆ ಎನ್ನಲಾಗುತ್ತಿದೆ.
ಈಗಾಗಲೆ ಮೇಲ್ನೋಟಕ್ಕೆ ಹೆಚ್ಚು ಹಣದ ದುರುಪಯೋಗದ ವಾಸನೆ ಸಿಕ್ಕಿದ್ದು ಸೊಸೈಟಿ ಸೂಪರ್ ಸೀಡ್ ಆಗುವತ್ತ ಹೆಜ್ಜೆ ಇಟ್ಟಿದೆ ಎನ್ನಲಾಗುತಿದ್ದೂ ಇದರ ಸುಳಿವನ್ನು ಅರಿತ ಹಲವು ನಿರ್ದೇಶಕರು ರಾಜಿನಾಮೆ ಪತ್ರ ಕೊಟ್ಟು ತಮ್ಮ ಸ್ಥಾನ ಶಾಶ್ವತ ಕಪ್ಪು ಪಟ್ಟಿ ಸೇರದಂತೆ ತಡೆಯುವ ಪ್ರಯತ್ನಕ್ಕಿಳಿದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆಯೂ ನಡೆದಿತ್ತು ಹಲವು ವಿವಾದ….
ಈ ಸೊಸೈಟಿಯ ಸಿಇಒ ವಿರುದ್ದ ತಿರುಗಿ ಬಿದ್ದ ನಿರ್ದೇಶಕರ ತಂಡ ಅವರನ್ನು ಅಮಾನತ್ತು ಪಡಿಸುವಲ್ಲಿಯೂ ಯಶಸ್ವಿಯಾಗಿದ್ದವು.ಅವರ ಬದಲಿಗೆ ಬಂದ ನೂತನ ಆಡಳಿತಾಧಿಕಾರಿ ನೇತೃತ್ವದಲ್ಲಿ ನಡೆದ ಆಡಿಟ್ ರಿಪೊರ್ಟ್ ಈಗ ಹೊರ ಬಂದಿದ್ದು ದೊಡ್ಡ ಹಗರಣದ ವಾಸನೆ ಮೂಗಿಗೆ ಬಡೆಯುತ್ತಿದೆ.
ಹಗರಣದ ಬಗ್ಗೆ ಸಹಕಾರ ಇಲಾಖೆ ತನಿಖೆ ಸರಿಯಾಗಿ ನಡೆಸಿದರೆ ಹಲವು ತಿಮಿಂಗಲಗಳ ಬಣ್ಣ ಬಯಲಾಗುವುದು ನಿಶ್ಚಿತ…
ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯತ್ ಒಂದರ ಅಧ್ಯಕ್ಷರಾಗಿ ಹೊಸನಗರ ತಾಲ್ಲೂಕಿನ ವ್ಯವಸಾಯ ಸಹಕಾರ ಸಂಘಕ್ಕೆ ಉಪಾಧ್ಯಕ್ಷರಾಗಿರುವ ವಿವಾದ:
ಇತ್ತೀಚೆಗೆ ಸೊಸೈಟಿಯ ವಿವಾದಗಳ ನಡುವೆ ಸೊಸೈಟಿಯ ಉಪಾಧ್ಯಕ್ಷರ ಮೇಲೆ ಇನ್ನೊಂದು ಆರೋಪ ಕೇಳಿಬಂದಿತ್ತು . ಈಗಾಗಲೇ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯತ್ ಒಂದರ ಅಧ್ಯಕ್ಷರಾಗಿರುವವರು ಹೊಸನಗರ ತಾಲೂಕಿನ ಹೊಂಬುಜದಲ್ಲಿ ಜಮೀನು ಇರುವ ಕಾರಣಕ್ಕೆ ಹೊಂಬುಜ ಸೌಹಾರ್ದ ಸಹಕಾರ ಸಂಘದಲ್ಲಿ ಅಕ್ರಮವಾಗಿ ನಿವಾಸಿ ದೃಡಿಕರಣ ನೀಡಿ ಷೇರು ಪಡೆದಿರುತ್ತಾರೆ , ಉಪಾಧ್ಯಕ್ಷರಾಗಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲದೆ ಇದ್ದರೂ ತನ್ನ ರಾಜಕೀಯ ಪ್ರಭಾವ ಬಳಸಿ ಅಕ್ರಮ ಹುದ್ದೆ ಪಡೆದಿದ್ದರು. ಅಕ್ರಮ ನಿವಾಸಿ ಧೃಡೀಕರಣದ ಆರೋಪ ಸಾಬೀತಾದರೆ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಪಂ ಅಧ್ಯಕ್ಷಗಿರಿಯೂ ರದ್ದಾಗಲಿದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ವಿವಾದಗಳಿಂದಲೇ ಪದೇ ಪದೇ ಕುಖ್ಯಾತಿ ಪಡೆಯುತ್ತಿರುವ ಹೊಂಬುಜ ವ್ಯವಸಾಯ ಸಹಕಾರ ಸಂಘದ ಹಗರಣಗಳು ಒಂದೊಂದೆ ಹೊರಬರುತ್ತಿದ್ದು ಈಗ ಸೊಸೈಟಿ ಸೂಪರ್ ಸೀಡ್ ಆಗುವ ಹಂತಕ್ಕೆ ಬಂದು ನಿಂತಿದೆ. ಒಟ್ಟಿನಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ನಿರ್ದೇಶಕರ ಕಿತ್ತಾಟದಲ್ಲಿ ಸೊಸೈಟಿಯ ಷೇರುದಾರರು ಬಡವಾಗುತ್ತಿದ್ದಾರೆ.