ಎಬಿವಿಪಿ‌ ಕಾರ್ಯಕರ್ತರಿಂದ ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಯತ್ನ : ಮುತ್ತಿಗೆ ಹಾಕಿದವರು ನಮ್ಮವರೇ ಎಂದ ಆರಗ ಜ್ಞಾನೇಂದ್ರ

ಶಿವಮೊಗ್ಗ: ನನ್ನ ನಿವಾಸದ ಮೇಲೆ ಮುತ್ತಿಗೆ ಹಾಕಿದವರು ನಮ್ಮವರೇ.ಬೆಂಗಳೂರಿನ ಮನೆಯ ಯಾವುದೇ ಗೇಟ್ ಕ್ಲೋಸ್ ಮಾಡಿರಲಿಲ್ಲ. ಹೆಚ್ಚಿನ ಭದ್ರತೆಯಿರಲಿಲ್ಲ. ಭದ್ರತಾ ಲೋಪ ಆಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ ಅಸಮರ್ಥ ನಾಯಕರು ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ನೀಡುವ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಎಷ್ಟು ಮಂದಿ ಕೊಲೆಯಾಗಿತ್ತು..? ಅಂದು ಇಡೀ ಪೊಲೀಸ್ ಇಲಾಖೆಯನ್ನು ಕೆಂಪಯ್ಯ ಹಿಡಿತಕ್ಕೆ ನೀಡಲಾಗಿತ್ತು. ಪೊಲೀಸರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದರು. ಹೀಗಿರುವಾಗ ಸಿದ್ದರಾಮಯ್ಯ ನನ್ನನ್ನು ಅಸಮರ್ಥ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಅಸಮರ್ಥರಾಗಿದ್ದರಿಂದಲೇ ಅವರ ಕ್ಷೇತ್ರದಲ್ಲಿ ಅವರೇ ಸೋತಿದ್ದು ಎಂದರು.



ಬೆಂಗಳೂರಿನ ನನ್ನ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ಪ್ರತಿಭಟನೆ ಮಾಡಿದ್ದಾರೆ. ಆ ಬಗ್ಗೆ ಗಮನ ಹರಿಸುವಂತೆ ನಾನು ಪೊಲೀಸರರಿಗೆ ಹೇಳಿದ್ದೇನೆ. ಅವರು ಎಬಿವಿಪಿ ಕಾರ್ಯಕರ್ತರೇ ಆಗಿದ್ದರೆ, ನಾನು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಸರ್ಕಾರ ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತದೆ. ನಾವು ಸಾಕಷ್ಟು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದೇವೆ. ಯೋಗಿ ಮಾದರಿಯೇ ಬೇರೆ ನಮ್ಮ ಪರಿಸ್ಥಿತಿಯೇ ಬೇರೆ.. ನಮಗೆ ನಮ್ಮದೇ ಆದ ಕಾರಣ ಇದೆ.




ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ. ಅವರ ಕಾಲದಲ್ಲಿ ಪೊಲೀಸರು ಧರಣಿ ನಡೆಸಿದರು. ನಾನು ಅವರ ಹಿರಿತನವನ್ನು ಗೌರವಿಸುತ್ತೇನೆ. ಅವರ ಕಾಲದಲ್ಲಿ ಪೊಲೀಸ್ ಇಲಾಖೆ ಕೆಂಪಯ್ಯ ಕೈಯಲ್ಲಿತ್ತು. ಅವರ ಕಾಲದಲ್ಲಿ ಒಟ್ಟು 32 ಕೊಲೆಗಳಾಗಿತ್ತು. ನಾನು ಸಮರ್ಥವಾಗಿ ಇಲಾಖೆಯನ್ನು ನಿಭಾಯಿಸಿದ್ದೇನೆ. ಸಚಿವನಾದ ಬಳಿಕ ಪ್ರತಿ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದೇನೆ. ಮಂಗಳೂರಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಶಾಂತಿ ಸಭೆ ನಡೆಯುತ್ತಿದೆ. ಪೊಲೀಸರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *