ಶಿವಮೊಗ್ಗ : ನಿನ್ನೆ ಸಂಜೆ ಏಳು ಮೂವತ್ತರ ಸುಮಾರಿಗೆ ಶಿವಮೊಗ್ಗದ ಗಾಂಧಿಬಜಾರ್ನಲ್ಲಿರುವ ಚೋರ್ಬಜಾರ್ ಬಟ್ಟೆಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕ ಸೆಂಥಿಲ್ಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಘಟನೆಯ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.
43 ವರ್ಷದ ಸೆಂಥಿಲ್ ಎಂಬಾತನಿಗೆ ಚಾಕುವಿನಿಂದ ನಾಲ್ಕೈದು ಕಡೆ ಇರಿಯಲಾಗಿದೆ. ಅವರನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. 307 ಸೆಕ್ಷನ್ ಅಡಿಯಲ್ಲಿ ಕೇಸ್ ಆಗಿದ್ದು, ಜೋಗಿ ಸಂತು, ರಮೇಶ್, ಲೋಕೇಶ್ ಹಾಗೂ ಇನ್ನೊಬ್ಬನ ವಿರುದ್ಧ ಕೇಸ್ ಆಗಿದೆ. ಲೋಕೇಶ್ ಎಂಬಾತನ ಪಕ್ಕದಲ್ಲಿಯೇ ಬಟ್ಟೆ ಅಂಗಡಿಯಿಟ್ಟುಕೊಂಡಿರುವ ಸೆಂಥಿಲ್ ಹಾಗೂ ಲೋಕೇಶ್ ನಡುವೆ ಅಂಗಡಿಯಲ್ಲಿ ಬಟ್ಟೆಗಳನ್ನ ಇಡುವ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಹಾಗೂ ಜೋಗಿ ಸಂತು ಈ ಹಿಂದೆ ಸೆಂಥಿಲ್ ಜೊತೆಗೆ ಇದ್ದವರು. ಅವರಿಬ್ಬರ ನಡುವೆ ಹಣಕಾಸು ಹಾಗೂ ಅಂಗಡಿಯ ವಿಷಯಕ್ಕೆ ವೈಷಮ್ಯ ಉಂಟಾಗಿತ್ತು. ಅಲ್ಲದೆ ಕಳೆದ ವರ್ಷ ಸೆಂಥಿಲ್ ಜೋಗಿ ಸಂತು ಮೇಲೆ ಹಲ್ಲೆ ಮಾಡಿದ ಪ್ರಕರಣವೊಂದು ಇತ್ತು. ಈ ಹಿನ್ನೆಲೆ ಅದರ ಪ್ರತೀಕಾರಕ್ಕಾಗಿಯೇ ಈ ಕೃತ್ಯವೆಸಗಲಾಗಿದೆ ಎಂಬ ಶಂಕೆ ಇದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಅಲ್ಲದೆ, ಘಟನೆ ಸಂಬಂಧ ನಾಲ್ವರ ಬಂಧನ ಇನ್ನಷ್ಟೆ ಆಗಬೇಕಿದೆ ಎಂದಿದ್ದಾರೆ.