ಶಿವಮೊಗ್ಗ ನಗರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮಂಜೂರು ಮಾಡಿದ್ದು, ದಿನಾಂಕ: 17-022022ರಂದು ರಾಜ್ಯಪತ್ರದಲ್ಲಿ ಮಂಜೂರಾತಿ ಆದೇಶ ಪ್ರಕಟವಾಗಿದ್ದು, ಹಲವು ತಿಂಗಳು ಕಳೆದರೂ ಆಯುಷ್ ವಿವಿ ಪ್ರಾರಂಭವಾಗದೇ ಇರುವುದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಮುಖಂಡರಾದ ಕಲ್ಲೂರು ಮೇಘರಾಜ್ ಮತ್ತು ಆರ್ ಎ ಚಾಬುಸಾಬ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ಸಮೀಪದ ಸೋಗಾನೆಯಲ್ಲಿ ಅಂದಿನ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರ ಶಿಫಾರಸ್ಸಿನ ಮೇರೆಗೆ ಮತ್ತು ನಮ್ಮ ಸಂಘಟನೆಯ ಪ್ರಯತ್ನದಿಂದ ಆಯುಷ್ ವಿವಿ ಶಿವಮೊಗ್ಗಕ್ಕೆ ಮಂಜೂರಾಗಿತ್ತು. ಸೋಗಾನೆಯ ಸರ್ವೆ ನಂ.120ರಲ್ಲಿ ಈ ಉದ್ದೇಶಕ್ಕೆ 100 ಎಕರೆ ಜಾಗ ಮಂಜೂರಾಗಿದ್ದು, 21-22ರ ಬಜೆಟ್‌ನಲ್ಲಿ 20 ಕೋಟಿ ರೂ. ಅನುದಾನವನ್ನು ಘೋಷಣೆ
ಮಾಡಲಾಗಿತ್ತು.
ವಿಶ್ವವಿದ್ಯಾನಿಲಯವನ್ನು 500 ಕೋಟಿ ರೂ. ಮೊತ್ತದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಬೊಮ್ಮಾಯಿ ಸರ್ಕಾರ ಈ ಎಲ್ಲಾ ಯೋಜನೆಗಳಿಗೆ ತಿಲಾಂಜಲಿ ಇಟ್ಟಿದೆ ಎನ್ನುವ ಸಂದೇಹ ಬರುತ್ತಿದೆ ಎಂದರು.
ಈ ಬಗ್ಗೆ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗದ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಕಾಳಜಿ ವಹಿಸಿ ಕೂಡಲೇ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಮುಖಂಡರಾದ ಹೊಳೆಮಡಿಲು ವೆಂಕಟೇಶ್, ಎಲ್.ಆರ್. ಗೋಪಾ ಲಕೃಷ್ಣ, ಶಂಕರನಾಯ್ಕ, ಮೋಹಿದ್ದೀನ್ ಮೊದಲಾದವರಿದ್ದರು.