ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸುವ ರೀತಿಯಲ್ಲಿ ಪಠ್ಯಪುಸ್ತಕವನ್ನು ರಚಿಸಿ ನಾಡ ಕವಿಯನ್ನು ಅವಮಾನಿಸುತ್ತಿರುವ ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಿಂದ ರೋಹಿತ್ ಚಕ್ರತೀರ್ಥರವರನ್ನು ವಜಾ ಮಾಡುವುದರ ಜೊತೆಗೆ ದೇಶ ದ್ರೋಹಿ ಕೇಸು ಹಾಕಿ ಜೈಲಿಗೆ ಕಳುಹಿಸಬೇಕೆಂದು ಹೊಸನಗರ ತಾಲೂಕಿನ ವಿವಿಧ ಪಕ್ಷ ಹಾಗೂ ಸಂಘಟನೆಗಳು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಕಾಲೇಜಿನ ಪ್ರಾಂಶುಪಾಲರಾದ ಸೊನಲೆ ಶ್ರೀನಿವಾಸ್, ರೋಹಿತ್ ಚಕ್ರತೀರ್ಥನು ಅಪ್ರಭುದ್ಧ ಹಾಗೂ ನಾಡಪ್ರಜ್ಞೆ ಇಲ್ಲದ ವ್ಯಕ್ತಿಯಾಗಿದ್ದು ಈತನ ಮಾತು ಮತ್ತು ಬರಹಗಳು ದೇಶದ ಸಂವಿಧಾನದ ಅಶಯಗಳಿಗೆ ಹಾಗೂ ಬಹುತ್ವಕ್ಕೆ ವಿರುದ್ಧವಾಗಿದೆ ಹೀಗಾಗಿ ನಾಡು ಮತ್ತು ದೇಶದ ಅಶಾಂತಿಗೆ ಕಾರಣರಾಗುತ್ತಿರುವ ಈತನನ್ನು ಅತ್ಯಂತ ಜವಾಬ್ದಾರಿಯುತವಾದ ಹುದ್ದೆಗೆ ನೇಮಿಸಿರುವುದು ಸರ್ಕಾರದ ತಪ್ಪು ಹೆಜ್ಜೆಯಾಗಿದೆ ಹೀಗಾಗಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರೋಹಿತ್ ಚಕ್ರತೀರ್ಥನನ್ನು ವಜಾ ಮಾಡಲಿ ಎಂದರು.
ನಂತರ ಮಾತನಾಡಿದ ರಾಜ್ಯ ಜೆಡಿಎಸ್ ಮುಖಂಡರಾದ ಆರ್ ಎ ಚಾಬುಸಾಬ್ ರೋಹಿತ್ ಚಕ್ರತೀರ್ಥ ಹಿಂದಿನಿಂದಲೂ ತನ್ನ ಬರಹಗಳ ಮೂಲಕ ಸದಾ ಸಂವಿಧಾನದ ಅಶಯಗಳಿಗೆ ನಾಡಿನ ಬಹುತ್ವಕ್ಕೆ ಅಪಚಾರ ಮಾಡಿಕೊಂಡು ಬರುತ್ತಿರುವುದು ಆತನ ಸಾಮಾಜಿಕ ಜಾಲತಾಣಗಳ ಬರಹಗಳ ಮೂಲಕ ತಿಳಿದು ಬರುತ್ತಿದೆ ಹೀಗಿದ್ದೂ ಸರ್ಕಾರ ಅತ್ಯಂತ ಕೆಟ್ಟ ಹೆಜ್ಜೆಯ ಮೂಲಕ ಅತ್ಯಂತ ಪವಿತ್ರವಾದ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ಖಂಡನೀಯ ಎಂದು ಹೇಳಿ ತಕ್ಷಣ ಇವರನ್ನು ಸಮಿತಿಯಿಂದ ವಜಾ ಮಾಡಬೇಕು ಎಂದರು.
ಹಾಲಗದ್ದೆ ಉಮೇಶ್ ಮಾತನಾಡಿ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸುವ ರೀತಿಯಲ್ಲಿ ಪಠ್ಯಪುಸ್ತಕವನ್ನು ರಚಿಸಿ ಅವಮಾನಿಸಿ ಪಠ್ಯ ಪರಿಷ್ಕರಣೆ ನಡೆಸುತಿದ್ದು ತಕ್ಷಣ ಈ ಪಠ್ಯಪುಸ್ತಕವನ್ನು ವಾಪಸ್ಸು ಪಡೆಯಬೇಕು ಹಾಗೂ ಹಿಂದಿನ ಸಾಲಿನಲ್ಲೇ ಇದ್ದ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಅದರ ಜೊತೆಗೆ ರೋಹಿತ್ ಚಕ್ರತೀರ್ಥ ನ ಮೇಲೆ ಪ್ರಕರಣ ದಾಖಲಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ದ ಬೃಹತ್ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ವಾಟಗೋಡು ಸುರೇಶ್,ಟಿ ಆರ್ ಕೃಷ್ಣಪ್ಪ, ಮಂಜುನಾಥ್ ಬ್ಯಾಣದ್,ಆರ್ ಎನ್ ಮಂಜುನಾಥ್, ಮಂಜುನಾಥ್ ಶ್ರೇಷ್ಠಿ, ರಾಘವೇಂದ್ರ ಹೆಚ್.ಎಸ್, ಜಯನಗರ ಶುಭಾಕರ, ಜಯನಗರ ಗುರು, ಕೆ ಇಲಿಯಾಸ್, ಗ್ಯಾಸ್ ಮಹೇಂದ್ರ, ಬಿ.ಜಿ ನಾಗರಾಜ್, ಕೆ ಇಲಿಯಾಸ್, ಡಾ|| ಪ್ರವೀಣ್‌ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಸಿಂಥಿಯಾ, ಶಾಹಿನಾ ಮುಂತಾದವರು ಉಪಸ್ಥಿತರಿದ್ದರು.